ಕಾರಿನಲ್ಲಿ ಬಂದ ತಂಡ ಯುವಕನನ್ನು ಅಪಹರಿಸಿ ಹಲ್ಲೆ: ಮೂವರು ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಕಾರಿನಲ್ಲಿ ಬಂದ ತಂಡವೊಂದು ಅಂಗಡಿಯಲ್ಲಿ ಕುಳಿತಿದ್ದ ಯುವಕನನ್ನು ಅಪಹರಿಸಿ ಆತನ ತಂದೆ ಮೇಲೂ ಹಲ್ಲೆ ನಡೆಸಿದ್ದು, ಪೊಲೀಸರ ಸಕಾಲಿಕ ಕಾರ್ಯಾಚರ ಣೆಯಿಂದ ಯುವಕನನ್ನು ರಕ್ಷಿಸಿದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಮೂವರನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಅಣಂಗೂರು ನಿವಾಸಿಗಳಾದ ಶಾಮು, ಇಯಾಚು ಅಲಿಯಾಸ್ ರಿಯಾಸ್ ಮತ್ತು ಜಂಶೀರ್ ಎಂಬಿವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಯುವಕನನ್ನು ಅಪಹರಿಸಲು ಬಳಸಿದ್ದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಟ್ಟತ್ತೋಡಿ ರಮ್ಲಾ ಮಂಜಿಲ್ ನಿವಾಸಿ ಹಾಗೂ ನಗರದ ಚಕ್ಕರ ಬಜಾರ್‌ನಲ್ಲಿ ಮೊಬೈಲ್ ಅಂಗಡಿ ವ್ಯಾಪಾರಿ ಸವಾದ್ (೨೫)ನನ್ನು ಕಾರಿನಲ್ಲಿ ಬಂದ ತಂಡವೊಂದು ನಿನ್ನೆ ಸಂಜೆ ಅಂಗಡಿಯಿಂದ ಬಲವಂತವಾಗಿ ತಮ್ಮ ಕಾರಿಗೇರಿಸಿ ಅಪಹರಿಸಿದೆ.  ಆಗ ಆ ಅಂಗಡಿಯಲ್ಲಿದ್ದ ಸವಾದ್‌ನ ತಂದೆ ಅಬೂಬಕರ್ ಎ.ಎಂ (೬೭) ತಡೆದಾಗ ಅಕ್ರಮಿಗಳ ತಂಡ ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಅಕ್ರಮಿಗಳ ತಂಡ ಸವಾದ್‌ನನ್ನು ಕಾರಿನಲ್ಲಿ ನಗರದ ಅಣಂಗೂರಿಗೆ ಒಯ್ದು ಅಲ್ಲಿ  ಹಲ್ಲೆ ನಡೆಸಿದಾಗ ಸವಾದ್‌ನ ಸ್ನೇಹಿತರ ತಂಡವೂ ಅಲ್ಲಿಗೆ ಆಗಮಿಸಿದ್ದು, ಈ ವೇಳೆ ಇತ್ತಂಡಗಳ ನಡುವೆ ಪರಸ್ಪರ ಭಾರೀ ಮಾರಾಮಾರಿ ನಡೆಯಿತು. ಆ ವಿಷಯ ತಿಳಿದ ಕಾಸರಗೋಡು ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ತಕ್ಷಣ ಸ್ಥಳಕ್ಕಾಗಮಿಸಿ ಘರ್ಷಣೆ ನಿರತರನ್ನು ಲಾಠಿ ಪ್ರವಾಹ ನಡೆಸಿ ಚದುರಿಸಿ ಬಳಿಕ ಸವಾದ್‌ನನ್ನು ರಕ್ಷಿಸಿದರು.

ಈ ಬಗ್ಗೆ ಸವಾದ್ ಮತ್ತು ಆತನ ತಂದೆ ನೀಡಿದ ದೂರಿನಂತೆ ಮೂವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದಾರೆ. ವಾಟ್ಸಪ್ ಮೂಲಕ ಯುವತಿಗೆ ಸಂದೇಶ ಕಳುಹಿಸಿದ ವಿಷಯವೇ ಘರ್ಷಣೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page