ಕಾರ್ಮಿಕ ಬಾವಿಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಓರ್ವ ಕಸ್ಟಡಿಗೆ

ಕಾಸರಗೋಡು: ವಲಸೆ ಕಾರ್ಮಿಕನಾದ ಯುವಕನೋರ್ವ ಬಾವಿಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಳಂಗರೆಯಲ್ಲಿ ನಡೆದಿದೆ. ತಳಂಗರೆ ಕುನ್ನಿಲ್‌ನ ಕೆ.ಎಸ್. ಅಬ್ದುಲ್ಲ ರಸ್ತೆ ಬಳಿಯ ಪೊದೆಗಳು ಆವರಿಸಿದ್ದ ಖಾಸಗಿ ಹಿತ್ತಿಲ ಬಾವಿಯಲ್ಲಿ ನಿನ್ನೆ ರಾತ್ರಿ ಈ ಮೃತದೇಹ ಪತ್ತೆಯಾಗಿದೆ.

ಮೃತ ವ್ಯಕ್ತಿ ತಮಿಳುನಾಡು ತಿರುವಣ್ಣಾಮಲೈಯ ವರಾವೂರ್ ಗ್ರಾಮದ ತಿರುಮಲೈ ಮಾವಟ್ಟಂ ಕಂಬಾಟ್ ನಿವಾಸಿ ಕಾಶಿ ಎಂಬವರ ಪುತ್ರ ಭೂಮಿನಾಥನ್ (೨೭) ಎಂದು ಗುರುತಿಸಲಾಗಿದೆ.

ಈತ ತಳಂಗರೆಯ ಬಾಡಿಗೆ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿದ್ದನು. ಕೂಲಿ ಕಾರ್ಮಿಕನಾಗಿರುವ ಈತ ಓರ್ವ ಮದ್ಯಪಾನಿಯೆಂದೂ ಹೇಳಲಾಗುತ್ತಿದೆ.  ಆತನ ಪತ್ನಿ ಕೆಲವು ದಿನಗಳ ಹಿಂದೆ ವಿರಸಗೊಂಡು ಊರಿಗೆ ಹೋಗಿದ್ದಳು. ಆಕೆ ಅಲ್ಲಿಂದ ಮೊನ್ನೆ ಹಿಂತಿರುಗಿದ್ದಳು. ಆ ವೇಳೆ ಪತಿ ನಾಪತ್ತೆಯಾಗಿರುವುದನ್ನು ಗಮನಿಸಿ ಶಂಕೆಗೊಂಡ ಆಕೆ ಬಳಿಕ ಆ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಳು. ಮೊನ್ನೆ ರಾತ್ರಿ ಆತ ಕ್ವಾರ್ಟರ್ಸ್‌ನ ತನ್ನ ಇತರ ಸದಸ್ಯರೊಂದಿಗೆ ಮದ್ಯದ ಅಮಲಿನಲ್ಲಿ ಜಗಳವಾಡಿದ್ದನೆಂದೂ, ಆ ಪರಿಸರದವರು ಪೊಲೀಸರಲ್ಲಿ ತಿಳಿಸಿದ್ದಾರೆ.

ನಿನ್ನೆ ಸುಮಾರು ೯.೩೦ರ ವೇಳೆಗೆ ಆತನ ಮೃತದೇಹ ತಳಂಗರೆಯಲ್ಲಿರುವ ಆತನ ಕ್ವಾರ್ಟರ್ಸ್‌ನ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು. ಸ್ಟೇಷನ್ ಇನ್‌ಚಾರ್ಜ್ ಮನೋ ಹರನ್ ಕೆ.ವಿ.ಯವರ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳದವರೂ ನಿನ್ನೆ ರಾತ್ರಿ ಘಟನೆ ನಡೆದ ಸ್ಥಳಕ್ಕೆ ಧಾವಿಸಿ, ಊರವರ ಸಹಾಯದಿಂದ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದರು. ಅಗ್ನಿಶಾಮಕದಳದ ಸಿಬ್ಬಂದಿಗಳಾದ ಸನ್ನಿ ಮ್ಯಾನ್ವಲ್, ಎಂ.ಪಿ. ಅರುಣ್, ಅರುಣ್ ಸುಂದರ್, ಸಿರಾಜುದ್ದೀನ್, ಹರೀಶ್ ಎಂಬವರೂ ಸಹಕರಿಸಿದರು.

ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ನಂತರ ಸಾವಿನ ಕಾರಣ ತಿಳಿದುಕೊಳ್ಳಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಮೃತ ಭೂಮಿನಾಥನ್‌ನ ಸ್ನೇಹಿತ ನೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page