ಕಾಸರಗೋಡಿನ ಯುವಕ ಮುಲ್ಕಿ ರೈಲು ಹಳಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕಾಸರಗೋಡು ನಿವಾಸಿಯಾದ ಯುವಕನೋರ್ವ ಕರ್ನಾಟಕದ ಮುಲ್ಕಿಯಲ್ಲಿ ರೈಲು ಹಳಿ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕಾಸರಗೋಡು ವಿದ್ಯಾನಗರ ನೆಲ್ಕಳ ಕಾಲನಿಯ ಸಂತೋಷ್ ಅಲಿಯಾಸ್ ಸುಗತ (32) ಸಾವನ್ನಪ್ಪಿದ ಯುವಕ. ರೈಲು ಢಿಕ್ಕಿ ಹೊಡೆದು ಇವರು ಸಾವ ನ್ನಪ್ಪಿರಬಹುದೆಂದು ಸಂಶಯಿಸಲಾಗುತ್ತಿದೆ. ಇವರು ಕಳೆದ ರವಿವಾರ ಮನೆಯಿಂದ ಹೊರ ಹೋಗಿದ್ದರು. ಮಧ್ಯಾಹ್ನ ಪತ್ನಿ ಫೋನ್ ಮೂಲಕ ಅವರನ್ನು ಸಂಪರ್ಕಿಸಿದಾಗ ಮಂಗಳೂರು ರೈಲು ನಿಲ್ದಾಣದಲ್ಲಿರುವ ಹೊಟೇಲೊಂದರ ಕಾರ್ಮಿಕನೋರ್ವ ಆ ಫೋನ್ ಕರೆ ಸ್ವೀಕರಿಸಿ, ಈ ಫೋನ್ ಹೊಂದಿರುವ ವ್ಯಕ್ತಿ ನಮ್ಮ ಹೊಟೇಲ್‌ನಲ್ಲಿ ಆಹಾರ ಸೇವಿಸಿದ ಬಳಿಕ ಹಣ ನೀಡಿಲ್ಲವೆಂದೂ, ಆದ್ದರಿಂದ ಅವರು ತಮ್ಮ ಫೋನನ್ನು ನಮ್ಮ ಕೈಗೆ ನೀಡಿ ಇಲ್ಲಿಂದ ಹೋಗಿದ್ದಾರೆಂದು ತಿಳಿಸಿದ್ದರು. ವಿಷಯ ತಿಳಿದ ಸಂತೋಷ್‌ರ ಸಂಬಂಧಿಕನೋರ್ವ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿ ಸಂತೋಷ್‌ರನ್ನು ಕಂಡು ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಸಂತೋಷ್ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದರು. ನಂತರ ಅವರಿಗಾಗಿ ವ್ಯಾಪಕ ಶೋಧ ಆರಂಭಿಸಿದಾಗ ನಿನ್ನೆ ಮುಲ್ಕಿ ರೈಲು ನಿಲ್ದಾಣದ ಬಳಿಯ ಹಳಿಯಲ್ಲಿ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಧವನ್-ಸಾವಿತ್ರಿ ದಂಪತಿ ಪುತ್ರನಾಗಿರುವ ಮೃತರು ಪತ್ನಿ ರೇವತಿ, ಮಗ ಪ್ರಜ್ವಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.