ಕಾಸರಗೋಡು ಜನರಲ್ ಆಸ್ಪತ್ರೆ ಇನ್ನು ವೈದ್ಯಕೀಯ ಕಾಲೇಜು
ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಇನ್ನು ಮೆಡಿಕಲ್ ಕಾಲೇಜು ಆಗಿ ಬದಲಾವಣೆಗೊಳ್ಳಲಿದೆ. ಈಗಿರುವ ಹೆಸರನ್ನು ವೈದ್ಯಕೀಯ ಕಾಲೇಜು ಆಗಿ ಪರಿವರ್ತಿಸುವ ಅಧಿಕೃತ ಅಧಿಸೂಚನೆಯನ್ನು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ವರು ಈಗಾಗಲೇ ಹೊರಡಿಸಿದ್ದಾರೆ.
ಜನರಲ್ ಆಸ್ಪತ್ರೆಯಲ್ಲಿ ಈಗಿರುವ ಎಲ್ಲಾ ಸೌಕರ್ಯಗಳನ್ನು ಸರಕಾರಿ ವೈದ್ಯಕೀಯ ಕಾಲೇಜಿನ ಭಾಗವನ್ನಾಗಿ ಸುವುದಾಗಿ ಅಧಿಸೂಚನೆಯಲ್ಲಿ ತಿಳಿಸ ಲಾಗಿದೆ. ಜನರಲ್ ಆಸ್ಪತ್ರೆಯ ಹೆಲ್ತ್ ಸರ್ವೀಸಸ್ ಡೈರೆಕ್ಟರ್ (ಆರೋಗ್ಯ ಸೇವಾ ನಿರ್ದೇಶಕರು)ರಿಂದ ಆರಂಭ ಗೊಂಡು ಎಲ್ಲಾ ವೈದ್ಯರು ಇನ್ನು ಈ ಆಸ್ಪತ್ರೆಯಲ್ಲಿ ಡೆಪ್ಯುಟೇಶನ್ ಹುದ್ದೆಯಲ್ಲಿ ಮುಂದುವರಿಯುವರು.
ಕಾಸರಗೋಡಿಗೆ ಮಂಜೂರು ಮಾಡಲಾಗಿರುವ ವೈದ್ಯಕೀಯ ಕಾಲೇಜು ಕಟ್ಟಡದ ನಿರ್ಮಾಣ ಕೆಲಸ ಉಕ್ಕಿನಡ್ಕ ದಲ್ಲಿ ಈಗ ನಿರ್ಮಾಣ ಹಂತದಲ್ಲಿದೆ. ಅಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲು ಅಲ್ಲಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲು 220 ಹಾಸಿಗೆ ಸೌಕರ್ಯ ಹೊಂದಿರುವ ಆಸ್ಪತ್ರೆಯ ಅಗತ್ಯವಿದೆ. ಮಾತ್ರವಲ್ಲ ಆಸ್ಪತ್ರೆ ಆರಂಭಗೊಂಡ ಬಳಿಕ ಮೂರು ವರ್ಷಗಳ ಸೇವಾ ಅನುಭವ ಹೊಂದಿರಬೇಕೆಂಬ ಮಾನದಂಡಗಳೂ ಇವೆ. ಅಂತಹ ಮಾನದಂಡಗಳನ್ನು ಪಾಲಿಸಿದಲ್ಲಿ ಮಾತ್ರವೇ ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಸಾಧ್ಯ. ಆದ್ದರಿಂದ ಉಕ್ಕಿನಡ್ಕದಲ್ಲಿನ ಕಾಲೇಜು ಕಟ್ಟಡ ಕೆಲಸ ಪೂರ್ಣ ಗೊಂಡು ಅಲ್ಲಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆಗೆ ಅಗತ್ಯವಿರುವಷ್ಟು ಹಾಸಿಗೆ ಸೌಕರ್ಯ ಏರ್ಪಡಿಸಿ ಅದರಂತೆ ಚಿಕಿತ್ಸೆ ಆರಂಭಗೊಂಡು ಮೂರು ವರ್ಷ ಪೂರೈಸಿದ ಬಳಿಕವಷ್ಟೇ ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಸಾಧ್ಯವಾಗಲಿದೆ. ಸದ್ಯ ಉಕ್ಕಿನಡ್ಕದಲ್ಲಿ ಅಂತಹ ಸೌಕರ್ಯ ಗಳಿಲ್ಲ. ಆದ್ದರಿಂದ ವೈದ್ಯಕೀಯ ಕಾಲೇಜನ್ನು ಈಗ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನು 2025-26ನೇ ವರ್ಷದ ಎಂಬಿಬಿಎಸ್ ಕೋರ್ಸ್ ಮುಂದಿನ ವರ್ಷ ಜನರಲ್ ಆಸ್ಪತ್ರೆಯಲ್ಲಿ ಆರಂಭಿಸುವ ಸಾಧ್ಯತೆ ಇದೆ. ಪ್ರಥಮ ವರ್ಷ ಬ್ಯಾಚ್‌ನಲ್ಲಿ ೫೦ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ನೀಡಲಾಗುವುದು. ಅದಕ್ಕಿರುವ ಅಗತ್ಯದ ಕ್ರಮಗಳಿಗೆ ಚಾಲನೆ ನೀಡಲಾಗಿದೆ. ವೈದ್ಯಕೀಯ ಆಯೋಗದ ಪರಿಶೀಲ ನೆಯ ಬಳಿಕವಷ್ಟೇ ಈ ವಿಷಯದಲ್ಲಿ ಅಂತಿಮ ತೀರ್ಮಾನ ಉಂಟಾಗಲಿದೆ.
ಉಕ್ಕಿನಡ್ಕದಲ್ಲಿ ಮಂಜೂರು ಮಾಡಲಾದ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕೆಲಸ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. ಈ ಕಟ್ಟಡದ ನಿರ್ಮಾಣ ಕೆಲಸ ಪೂರ್ಣಗೊಂಡು ಚಿಕಿತ್ಸಾ ಸೌಕರ್ಯ ಆರಂಭಿಸಿದ ಮೂರು ವರ್ಷಗಳ ಬಳಿಕವಷ್ಟೇ ಅಂಗೀಕೃತ ಮಾನದಂಡಗಳ ಪ್ರಕಾರ ವೈದ್ಯಕೀಯ ಕಾಲೇಜನ್ನು ಬಳಿಕ ಅಲ್ಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.