ಕಾಸರಗೋಡು ನಗರಸಭೆ ವಿತ್ತೀಯ ಸಮಿತಿಯ ತಾತ್ಕಾಲಿಕ ಅಧ್ಯಕ್ಷೆಯಾಗಿ ಸಿಪಿಎಂನ ಲಲಿತ ಆಯ್ಕೆ
ಕಾಸರಗೋಡು: ಕಾಸರಗೋಡು ನಗರಸಭೆಯ ವಿತ್ತೀಯ ಸ್ಥಾಯೀ ಸಮಿತಿಯ ತಾತ್ಕಾಲಿಕ ಅಧ್ಯಕ್ಷರನ್ನಾಗಿ ಸಿಪಿಎಂ ಕೌನ್ಸಿಲರ್ ಎಂ. ಲಲಿತರನ್ನು ಆರಿಸಲಾಗಿದೆ.
ಈ ಸಮಿತಿಯ ಅಧ್ಯಕ್ಷೆಯಾಗಿ ರುವ ನಗರಸಭೆಯ ಉಪಾಧ್ಯಕ್ಷೆ ಶಂಶೀದಾ ಫಿರೋಜ್ ಈಗ ರಜೆಯಲ್ಲಿ ರುವ ಕಾರಣದಿಂದ ತೆರವುಗೊಂಡ ಆ ಸ್ಥಾನದ ಆಯ್ಕೆಗಾಗಿ ಮತದಾನ ನಡೆಸಬೇಕಾಗಿ ಬಂತು. ನಗರಸಭೆಯ ಉಪಾಧ್ಯಕ್ಷೆ ರಜೆಯಲ್ಲಿರುವುದರಿಂದ ಹಣಕಾಸು ಸಮಿತಿಯಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಾಗಿದ್ದು ಅದು ಕೆಲವೊಂದು ನಾಟಕೀಯ ಬೆಳವಣಿಗೆಗೂ ದಾರಿಮಾಡಿಕೊಟ್ಟಿತು. ಇದರಿಂದಾಗಿ ನಿನ್ನೆ ನಡೆದ ನಗರಸಭಾ ಹಣಕಾಸು ಸ್ಥಾಯಿ ಸಮಿತಿ ಸಭಯಲ್ಲಿ ಅದರ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಸಬೇಕಾಗಿ ಬಂತು. ಇದರಂತೆ ಬಿಜೆಪಿಯ ಅಭ್ಯರ್ಥಿಯಾಗಿ ಪಿ. ರಮೇಶ್, ಸಿಪಿಎಂನ ಎಂ. ಲಲಿತ ಸ್ಪರ್ಧೆಗಿಳಿದಿದ್ದರು. ಅದರಂತೆ ನಡೆದ ಮತದಾನದಲ್ಲಿ ಇಬ್ಬರು ಪಕ್ಷೇತರ ಕೌನ್ಸಿಲರ್ಗಳು ಲಲಿತರ ಪರವಾಗಿ ಮತ ಚಲಾಯಿಸಿದರು. ಮತದಾನದಲ್ಲಿ ರಮೇಶ್ ಮತ್ತು ಲಲಿತರಿಗೆ ತಲಾ ಮೂರರಂತೆ ಮತಗಳು ಲಭಿಸಿತ್ತು. ಇದರಿಂದಾಗಿ ಅಧ್ಯಕ್ಷರ ಆಯ್ಕೆಗೆ ಚೀಟಿ ಎತ್ತಬೇಕಾಗಿಬಂತು. ಅದರಲ್ಲಿ ಅಧ್ಯಕ್ಷರಾಗುವ ಅದೃಷ್ಟ ಲಲಿತರಿಗೆ ಒದಗಿಬಂತು. ವಿತ್ತೀಯ ಸಮಿತಿಯ ಹೊಸ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಎಂ. ಲಲಿತ ನಗರಸಭಾ ೧೭ನೇ ವಾರ್ಡ್ ಕೌನ್ಸಿಲರ್ ಆಗಿದ್ದಾರೆ.
ನಗರಸಭಾ ಉಪಾಧ್ಯಕ್ಷೆಯ ರಜೆ ಮುಗಿದು ಹಿಂತಿರುಗಿ ಬರುವ ತನಕ ಲಲಿತರೇ ವಿತ್ತೀಯ ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.
ಶಂಶೀದಾ ಫಿರೋಜ್ ಆರೋಗ್ಯ ಸಮಸ್ಯೆಯಿಂದಾಗಿ ಈಗ ಮೆಡಿಕಲ್ ರಜೆಯಲ್ಲಿದ್ದಾರೆಂದೂ ಅದರಿಂದಾಗಿ ಚುನಾವಣೆ ಒಂದು ತಾತ್ಕಾಲಿಕ ವ್ಯವಸ್ಥೆ ಮಾತ್ರವೇ ಆಗಿದೆಯೆಂದು ನಗರಸಭಾ ಧ್ಯಕ್ಷ ಅಬ್ಬಾಸ್ ಬೀಗಂ ಹೇಳಿದ್ದಾರೆ.