ಕುಂಬಳೆಯಲ್ಲಿ ಕೊಲೆ ಪ್ರಕರಣದ ಆರೋಪಿಯನ್ನು ತಲೆಗೆ ಕಲ್ಲುಹಾಕಿ ಕೊಲೆಗೈದು ಮೃತದೇಹ ಪೊದೆಗಳೆಡೆ ಉಪೇಕ್ಷೆ

ಕುಂಬಳೆ: ಕೊಲೆ ಪ್ರಕರಣದಲ್ಲಿ ಆರೋಪಿಯಾದ ಯುವಕನನ್ನು ತಲೆಗೆ ಕಲ್ಲು ಹಾಕಿ ಕೊಲೆಗೈದು  ಮೃತದೇಹವನ್ನು ಪೊದೆಗಳೆಡೆ ಉಪೇಕ್ಷಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ.

ಈ ಹಿಂದೆ ಕುಂಬಳೆ ಬಳಿಯ ಶಾಂತಿಪಳ್ಳ ಲಕ್ಷಂವೀಡ್ ಕಾಲನಿ ನಿವಾಸಿಯೂ ಈಗ ವಿದ್ಯಾನಗರದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿದ್ದ   ಅಬ್ದುಲ್ ರಶೀದ್ ಯಾನೆ ಸಮೂಸ ರಶೀದ್ (೩೮) ಎಂಬಾತ ಕೊಲೆಗೀಡಾದ ವ್ಯಕ್ತಿ.

ಕುಂಬಳೆ ಬಳಿಯ ಕುಂಟಂಗೇರಡ್ಕ ಐಎಚ್‌ಆರ್‌ಡಿ ಕಾಲೇಜಿನ ಹಿಂಭಾಗದ ಮೈದಾನದ ಸಮೀಪ ಹಿತ್ತಿಲಿನಲ್ಲಿ ಪೊದೆಗಳೆಡೆ ಇಂದು ಬೆಳಿಗ್ಗೆ ೬.೩೦ರ ವೇಳೆ ಅಬ್ದುಲ್ ರಶೀದ್‌ನ ಮೃತದೇಹ ಪತ್ತೆಯಾಗಿದೆ. ತ್ಯಾಜ್ಯಗಳನ್ನು ಎಸೆಯಲು ತೆರಳಿದ ಮಂದಿಗೆ ಮೃತದೇಹ ಕಂಡು ಬಂದಿದೆ. ಅವರು ಈ ವಿಷಯವನ್ನು ಪೊಲೀಸರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ತಿಳಿಸಿದ್ದಾರೆ. ಇದರಂತೆ ಇನ್ಸ್‌ಪೆಕ್ಟರ್ ಇ. ಅನೂಪ್‌ರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಉನ್ನತ ಪೊಲೀಸ್ ಅಧಿಕಾರಿಗಳು, ಶ್ವಾನದಳ ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ತಲುಪಿದ್ದಾರೆ.

ಕಾಲೇಜಿನ ಮೈದಾನದ ಅಲ್ಪ ದೂರದಲ್ಲಿ ಕುಳಿತುಕೊಳ್ಳಲು ತಾತ್ಕಾಲಿಕ ಆಸನ ನಿರ್ಮಿಸಲಾಗಿದೆ. ಅದರ ಸಮೀಪ ರಕ್ತಸಿಕ್ತಗೊಂಡ ಕಗ್ಗಲ್ಲಿನ ತುಂಡೊಂದು ಪತ್ತೆಯಾಗಿದೆ. ಅಲ್ಲಿಂದ ಅಲ್ಪ ದೂರದ ಪೊದೆಗಳೆಡೆ ಮೃತದೇಹ ಕಂಡು ಬಂದಿದೆ. ಮೈದಾನ ಸಮೀಪದ ಟವರ್ ಬಳಿ ತಲೆಗೆ ಕಗ್ಗಲ್ಲು ಹಾಕಿ ಕೊಲೆಗೈದ ಬಳಿಕ ಮೃತದೇಹವನ್ನು ಎಳೆದೊಯ್ದು ಪೊದೆಗಳೆಡೆ ಉಪೇಕ್ಷಿಸಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹವನ್ನು ಎಳೆದೊಯ್ದ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಇದೊಂದು ಯೋಜ ನಾಬದ್ಧ ಕೊಲೆಕೃತ್ಯವಾಗಿದೆಯೆಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.  ಮನೆಯಿಂದ ಹೊರಟ ಅಬ್ದುಲ್ ರಶೀದ್‌ನೊಂದಿಗೆ ಹಲವು ಪ್ರಕರಣಗಳಲ್ಲಿ ಆರೋಪಿಯಾದ ವ್ಯಕ್ತಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.

ಇದೇ ವೇಳೆ ಕೊಲೆಗೀಡಾಗಿರುವ ಅಬ್ದುಲ್ ರಶೀದ್ ಕೊಲೆ ಪ್ರಕರಣವೊಂದರ ಆರೋಪಿ ಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

೨೦೧೯ ಅಕ್ಟೋಬರ್ ೧೮ರಂದು ಮಧೂರು ಪಟ್ಲ ನಿವಾಸಿ ಶೈನ್ ಯಾನೆ ಶಾನು (೨೪)ವನ್ನು ಕೊಲೆಗೈದ ಪ್ರಕರಣದಲ್ಲಿ ಅಬ್ದುಲ್ ರಶೀದ್ ಆರೋಪಿಯಾಗಿದ್ದಾನೆ.  ಹಲವು ಪ್ರಕರಣಗಳಲ್ಲಿ ಆರೋಪಿಯಾದ ಶಾನು ನ್ಯಾಯಾಲಯಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದನು. ಅನಂತರ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಪುತ್ರ ನಾಪತ್ತೆಯಾಗಿರುವುದಾಗಿ ತಿಳಿಸಿ ತಾಯಿ ಪ್ರಮೀಳ ೨೦೧೯ ಸೆಪ್ಟಂಬರ್ ೨೬ರಂದು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಶೈನ್ ಯಾನೆ ಶಾನುವಿನ ಮೃತದೇಹ  ಕಾಸರಗೋಡು ನಗರದ ನಾಯಕ್ಸ್ ರೋಡ್‌ನಲ್ಲಿ ದಿನೇಶ್ ಬೀಡಿ ಕಂಪೆನಿ ಸಮೀಪದ ಪಾಳು ಬಾವಿಯಲ್ಲಿ ಪತ್ತೆಯಾಗಿತ್ತು. ಮೃತದೇಹದಲ್ಲಿ ಇರಿತದ ಗಾಯಗಳಿದ್ದುದಾಗಿ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಪ್ರಕರಣಕ್ಕೆ  ಸಂಬಂಧಿಸಿ ಆರೋಪಿಗಳಾದ ಮೊಗ್ರಾಲ್ ಕೆ.ಕೆ. ಪುರದ ಮುನ್ನ ಯಾನೆ ಮುನಾವೀರ್ (೨೫), ಕಾಸರಗೋಡು ನೆಲ್ಲಿಕುಂಜೆಯ ಜಯು ಯಾನೆ ಜಯಚಂದ್ರನ್ (೪೨) ಎಂಬಿವರ ಸಹಿತ ಮೂರು ಮಂದಿಯನ್ನು ಅಂದು ಪೊಲೀಸರು ಸೆರೆ ಹಿಡಿದಿದ್ದರು. ಈ ಪ್ರಕರಣದಲ್ಲಿ ದ್ವಿತೀಯ ಆರೋಪಿಯಾಗಿ ಅಬ್ದುಲ್ ರಶೀದ್ ವಿರುದ್ಧ ಕೇಸು ದಾಖಲಿಸಲಾಗಿತ್ತು. ಘಟನೆ ಬಳಿಕ ಈತ ಕೊಲ್ಕತ್ತಾ, ಬೆಂಗಳೂರು, ಮೈಸೂರು, ಮುಂಬಯಿ ಮೊದಲಾದೆಡೆಗಳಲ್ಲಿ ತಲೆ ಮರೆಸಿಕೊಂಡಿದ್ದನು. ಅನಂತರ ೨೦೨೨ ಡಿಸೆಂಬರ್ ೧೩ರಂದು ಈತ ಊರಿಗೆ ಬಂದಿದ್ದನು. ಈ ವಿಷಯ ತಿಳಿದ ಪೊಲೀಸರು ಈತನನ್ನು ಮನೆಗೆ ಸುತ್ತುವರಿದು ಸೆರೆ ಹಿಡಿದಿದ್ದರು. ಶೈನ್ ಯಾನೆ ಶಾನು ಕೊಲೆ ಪ್ರಕರಣದ ಆರೋಪ ಪಟ್ಟಿಯಲ್ಲಿ ಅಬ್ದುಲ್ ರಶೀದ್‌ನನ್ನು ಪ್ರಥಮ ಆರೋಪಿಯೆಂದು ತಿಳಿಸಲಾಗಿತ್ತು. ಈ ಪ್ರಕರಣದಲ್ಲಿ   ರಿಮಾಂಡ್‌ನಲ್ಲಿದ್ದ ಅಬ್ದುಲ್ ರಶೀದ್ ತಿಂಗಳುಗಳ ಹಿಂದೆಯಷ್ಟೇ ಊರಿಗೆ ಮರಳಿ ಬಂದಿದ್ದನು. ಇದೀಗ ಈತ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಯಾರು ಈ ಕೊಲೆ ನಡೆಸಿದ್ದಾರೆಂದು ತಿಳಿಯಲು ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ ಕೊಲೆಗಡುಕನೆಂದು ಸಂಶಯಿಸುವ ವ್ಯಕ್ತಿಯೋರ್ವನನ್ನು ಕೇಂದ್ರೀಕರಿಸಿ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮುಹಮ್ಮದಲಿ- ಸೈರುನ್ನೀಸ ದಂಪತಿಯ ಪುತ್ರನಾದ ಅಬ್ದುಲ್ ರಶೀದ್ ಸಹೋದರಿಯ ರಾದ ರಮೀಸ, ಹಾಜಿರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾನೆ.

Leave a Reply

Your email address will not be published. Required fields are marked *

You cannot copy content of this page