ಕುಂಬಳೆಯಲ್ಲಿ ಮತ್ತೆ ಕಳ್ಳರ ಹಾವಳಿ: ವೈದ್ಯರ ಮನೆಗೆ ನುಗ್ಗಿ ಕಳವಿಗೆ ಯತ್ನ
ಕುಂಬಳೆ: ಕುಂಬಳೆಯಲ್ಲಿ ವೈದ್ಯರೊಬ್ಬರ ಮನೆಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದು, ಮನೆ ಮಂದಿ ಎಚ್ಚೆತ್ತಾಗ ಓಡಿ ಪರಾರಿಯಾಗಿದ್ದಾರೆ.
ಕುಂಬಳೆ ಜಿಲ್ಲಾ ಸಹಕಾರಿ ಆಸತ್ರೆಯ ವೈದ್ಯ ಸಂದೀಪ್ ಎಂಬವರ ಕೃಷ್ಣನಗರದಲ್ಲಿರುವ ಮನೆಗೆ ಕಳ್ಳರು ನುಗ್ಗಿದ್ದಾರೆ. ರಾತ್ರಿ ೧೨ ಗಂಟೆ ವೇಳೆ ಮನೆಯ ಮುಂಭಾಗ ತೆರೆದು ಒಳನುಗ್ಗಿದ್ದಾರೆ. ಘಟನೆ ವೇಳೆ ವೈದ್ಯರು ಆಸ್ಪತ್ರೆಗೆ ತೆರಳಿದ್ದರು. ಮನೆಯಲ್ಲಿ ಅವರ ಪತ್ನಿ ಹಾಗೂ ಮಕ್ಕಳಿದ್ದರು. ಮನೆಯೊಳಗೆ ಸದ್ದು ಕೇಳಿ ಎಚ್ಚೆತ್ತು ನೋಡಿದಾಗ ಕಳ್ಳರು ಓಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಆಸ್ಪತ್ರೆಯಲ್ಲಿದ್ದ ವೈದ್ಯರು ಹಾಗೂ ಅಲ್ಲಿನ ಸಿಬ್ಬಂದಿಗಳು ತಕ್ಷಣ ಮನೆಗೆ ತಲುಪಿ ಹುಡುಕಾಡಿದ್ದು, ಆದರೆ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಕಳೆದ ಕೆಲವು ದಿನಗಳಿಂದ ಕುಂಬಳೆ ಪರಿಸರದಲ್ಲಿ ಕಳ್ಳರ ಹಾವಳಿ ತೀವ್ರಗೊಂಡಿದೆ. ಮಾರ್ಚ್ ೨೫ರಂದು ರಾತ್ರಿ ಶಾಂತಿಪಳ್ಳ ನಿವಾಸಿ ಸುಬೈರ್ ಎಂಬವರ ಮನೆಗೆ ನುಗ್ಗಿದ ಕಳ್ಳರು ೨೫ ಪವನ್ ಚಿನ್ನಾಭರಣ ಹಾಗೂ ಯುಎಇ ಕರೆನ್ಸಿ ದಿರ್ಹಾಂ ಕಳವುಗೈದಿದ್ದರು. ೨೬ರಂದು ಕೃಷ್ಣನಗರ ನಿವಾಸಿಯೂ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯ ನೌಕರೆಯಾದ ಶಾಲಿನಿ ಎಂಬವರ ಮನೆಗೂ ಕಳ್ಳರು ನುಗ್ಗಿದ್ದರು. ಕಪಾಟು ತೆರೆಯುವ ಸದ್ದು ಕೇಳಿ ಮನೆಯವರು ಎಚ್ಚೆತ್ತಾಗ ಅವರನ್ನು ದೂಡಿಹಾಕಿ ಕಳ್ಳರು ಓಡಿ ಪರಾರಿಯಾಗಿದ್ದರು.