ಕುಂಬಳೆಯಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ತ್ವರಿತಗತಿಯಲ್ಲಿ : ಶೌಚಾಲಯ, ವಿಶ್ರಾಂತಿ ಕೇಂದ್ರ ಉದ್ಘಾಟನೆಗೆ ಸಿದ್ಧ
ಕುಂಬಳೆ : ಪಂಚಾಯತ್ ಆಡಳಿತ ಸಮಿತಿಯ ಕಾಲಾವಧಿ ಕೊನೆಗೊಳ್ಳಲು ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿರುವಂತೆ ಕುಂಬಳೆ ಪೇಟೆಯ ಮೂರು ಪ್ರಮುಖ ಯೋಜನೆಗಳಲ್ಲಿ ಎರಡನ್ನು ಜ್ಯಾರಿಗೊಳಿಸಲು ಆಡಳಿತ ಸಮಿತಿ ಪ್ರಯತ್ನ ಮುಂದುವರಿಸಿದೆ. ಮೀನು ಮಾರ್ಕೆಟ್ ನಿರ್ಮಾಣ ಕಾಮಗಾರಿ ಈಗ ನಡೆಯುತ್ತಿದೆ. ಇದರ ಅರ್ಧ ಕೆಲಸ ಪೂರ್ತಿಗೊಂಡಿದೆ. ದೀರ್ಘ ಕಾಲದ ಬೇಡಿಕೆಯ ಬಳಿಕ ನಗರ ಮಧ್ಯದಲ್ಲಿ ಶೌಚಾಲಯ ಸಿದ್ಧಗೊಂಡಿದೆ. ಬದಿಯಡ್ಕ ರಸ್ತೆಯಲ್ಲಿ ಶೌಚಾಲಯ ಹಾಗೂ ವಿಶ್ರಾಂತಿ ಕೇಂದ್ರ ವನ್ನೊಳಗೊಂಡ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ. ಆದರೆ ಬಸ್ ನಿಲ್ದಾಣ- ಶಾಪಿಂಗ್ ಕಾಂಪ್ಲೆಕ್ಸ್ ಈಗಲೂ ಅನಿಶ್ಚಿತತೆಯಲ್ಲಿದೆ. ಈ ಹಿಂದಿನ ನಾಲ್ಕು ಆಡಳಿತ ಸಮಿತಿಗಳಿಗೆ ಬಸ್ ನಿಲ್ದಾಣ ವಿಷಯದಲ್ಲಿ ನೀಡಿದ ಭರವಸೆಯನ್ನು ಜ್ಯಾರಿಗೊಳಿಸಲು ಸಾಧ್ಯ ವಾಗಿರಲಿಲ್ಲ. ಇದು ಭಾರೀ ಟೀಕೆಗಳಿಗೆ ಕಾರಣ ವಾಗಿತ್ತು. ಕುಂಬಳೆಯಲ್ಲಿ ಸಿದ್ಧಗೊಳ್ಳುವ ವಿಶ್ರಾಂತಿ ಕೇಂದ್ರ 43 ಲಕ್ಷ ರೂ. ಖರ್ಚು ಮಾಡಿ ನಿರ್ಮಿಸಲಾಗಿದೆ. ಪ್ರಯಾಣಿಕರಾದ ಮಹಿಳೆಯರಿಗೆ ವಿಶ್ರಾಂತಿ ಪಡೆಯಲಿರುವ ಸೌಕರ್ಯ ಗಳು ಈ ಕಟ್ಟಡದಲ್ಲಿದೆ. ಮಕ್ಕಳಿಗೆ ಹಾಲುಣಿಸಲು ಬೇಕಾದ ಸೌಕರ್ಯ ವೂ ಇದೆ. ಇದರ ಹೊರತು ಕಾಫಿ ಶಾಪ್ ಕೂಡಾ ಇರುವುದು. ಲೋ ಕೋಪಯೋಗಿ ಇಲಾಖೆಯ ಅಧೀನದಲ್ಲಿ ಈ ಸ್ಥಳವಿದೆ. ಪ್ರತ್ಯೇಕ ಅನುಮತಿ ಪಡೆದು ಪಂಚಾಯತ್ ದಾರಿ ಬದಿ ವಿಶ್ರಾಂತಿ ಕೇಂದ್ರ ನಿರ್ಮಿಸಿರುತ್ತದೆ. ತಿರುವನಂತಪುರದ ‘ಹಾಬಿಟಾಟ್’ ಏಜೆನ್ಸಿಗೆ ಇದರ ನಿರ್ಮಾಣದ ಹೊಣೆಗಾರಿಕೆ ವಹಿಸಿಕೊಡ ಲಾಗಿದೆ. ಕೊನೆಯ ಹಂತದ ಕಾಮಗಾರಿಗಳು ಮುಗಿದರೆ ಕಟ್ಟಡವನ್ನು ತೆರೆದುಕೊಡಲಾಗು ವುದು. ಆಧುನಿಕ ರೀತಿಯಲ್ಲಿರುವ ಮೀನು ಮಾರ್ಕೆಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮಾಂಸ ಹಾಗೂ ತರಕಾರಿ ಮಾರಾಟಕ್ಕೆ ಸೌಕರ್ಯವಾ ಗುವ ರೀತಿಯಲ್ಲಿ ಇದರ ನಿರ್ಮಾಣ ನಡೆಯುವುದು. ಜಿಲ್ಲಾ ಅಭಿವೃದ್ಧಿ ಪ್ಯಾಕೇಜ್ನಲ್ಲಿ ಒಳಪಡಿಸಿ ಒಂದು ಕೋಟಿ 12 ಲಕ್ಷ ರೂಪಾಯಿ ಖರ್ಚಿನಲ್ಲಿ ಮೀನು ಮಾರುಕಟ್ಟೆ ನಿರ್ಮಿಸಲಾಗುವುದು. ಕಾಲಾವಧಿ ಮುಗಿಯುವ ಮೊದಲೇ ಇದನ್ನು ತೆರೆದುಕೊಡಲಿರುವ ಪ್ರಯತ್ನದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಹಳೆ ಕಟ್ಟಡವನ್ನು ಮುರಿದು ತೆಗೆದು ಆಧುನಿಕ ರೀತಿಯ ಮೀನು ಮಾರುಕಟ್ಟೆ ನಿರ್ಮಿಸಲಾಗುತ್ತದೆ.