ಕುಂಬಳೆ ಪಂ. ಗ್ರಾಮ ಬಂಡಿಗೆ ೬ರಂದು ಸಚಿವ ಆಂಟನಿರಾಜು ಚಾಲನೆ
ಕುಂಬಳೆ: ಕುಂಬಳೆ ಪರಿಸರದ ಸಂಚಾರ ಸಮಸ್ಯೆಗೆ ಪರಿಹಾರ ಕಾಣುವುದಕ್ಕಾಗಿ ಕೆಎಸ್‌ಆರ್‌ಟಿಸಿ ಯೊಂದಿಗೆ ಸಹಕರಿಸಿ ಕುಂಬಳೆ ಪಂಚಾಯತ್‌ನ ‘ಗ್ರಾಮ ಬಂಡಿ’ ಸಂಚಾರ ಆರಂಭಿಸಲಿದೆ ಎಂದು ಪಂ. ಆಡಳಿತಾಧಿಕಾರಿಗಳು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಈ ತಿಂಗಳ ೫ರಂದು ಬೆಳಿಗ್ಗೆ ೧೦ಕ್ಕೆ ಬಂಬ್ರಾಣದಲ್ಲಿ ಸಾರಿಗೆ ಸಚಿವ ಆಂಟನಿರಾಜು ಗ್ರಾಮ ಬಂಡಿಗೆ ಚಾಲನೆ ನೀಡುವರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯಲ್ಲಿ ಈ ರೀತಿಯಲ್ಲಿ ಬಸ್ ಸಂಚಾರ ಆರಂಭಿಸುವುದು ಪ್ರಥಮವಾಗಿ ಕುಂಬಳೆ ಪಂಚಾಯತ್ ಆಗಿದೆ ಎಂದು ಅಧ್ಯಕ್ಷೆ ಯು.ಪಿ. ತಾಹಿರ ಯೂಸಫ್ ನುಡಿದರು. ೨೦೨೩-೨೪ರ ವಾರ್ಷಿಕ ಯೋಜನೆಯಲ್ಲಿ ಸೇರಿಸಿ ೧೫ ಲಕ್ಷ ರೂ. ಇದಕ್ಕಾಗಿ ಮೀಸಲಿಡಲಾಗಿದೆ. ಇದಕ್ಕೆ ಜಿಲ್ಲಾ ಯೋಜನಾ ಸಮಿತಿ ಅಂಗೀಕಾರ ನೀಡಿದೆ. ಇಂಧನ ವೆಚ್ಚ ಪಂಚಾಯತ್, ಬಸ್ ನೌಕರರ ವೇತನ ಹಾಗೂ ದುರಸ್ತಿ ಕೆಲಸ ಕೆಎಸ್‌ಆರ್‌ಟಿಸಿ ವಹಿಸಲಿದೆ. ಟಿಕೆಟ್ ಮೊತ್ತವನ್ನು ಕೆಎಸ್‌ಆರ್‌ಟಿಸಿಗೆ ನೀಡಲಾಗುವುದು. ಪಿ.ಕೆ. ನಗರ, ಉಳುವಾರ್ ಪಾಂಬಟ್ಟಿ, ಕುಂಬಳೆ ಸರಕಾರಿ ಆಸ್ಪತ್ರೆ, ಐಎಚ್‌ಆರ್‌ಡಿ ಪೇರಾಲ್, ಮೊಗ್ರಾಲ್ ಶಾಲೆ, ಮುಳಿಯಡ್ಕ ಎಂಬೀ ರೂಟ್‌ಗಳಲ್ಲಿ ಬಸ್ ಸಂಚರಿ ಸಲಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ತ್ರಿಸ್ತರ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸುವರು. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷೆ ತಾಹಿರ ಯೂಸಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ. ಸಬೂರ, ಬಿ.ಎ. ರಹ್‌ಮಾನ್ ಆರಿಕ್ಕಾಡಿ, ನಸೀಮ ಖಾಲಿದ್, ಯೂಸಫ್ ಉಳುವಾರ್ ಭಾಗವಹಿಸಿದರು.