ಕುಂಬಳೆ ಬಸ್ ನಿಲ್ದಾಣಕ್ಕೆ ವಾಹನಗಳ ಪ್ರವೇಶ, ನಿರ್ಗಮನ; ಜನರಲ್ಲಿ ಹೆಚ್ಚಿದ ಆತಂಕ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪೂರ್ಣಗೊಳ್ಳುತ್ತಲೇ ಕಾಸರಗೋಡು ಭಾಗದಿಂದ ತೆರಳುವ ವಾಹನಗಳು ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸಲು ಹಾಗೂ ಕುಂಬಳೆ ಬಸ್ ನಿಲ್ದಾಣದಿಂದ ವಾಹನಗಳು ಮಂಗಳೂರು ರಸ್ತೆಗೆ ಪ್ರವೇಶಿಸಲು ಕಷ್ಟಕರವಾಗಲಿದೆ ಯೆಂಬ ಆತಂಕ ಹೆಚ್ಚಿದೆ.
ಕುಂಬಳೆ ರೈಲ್ವೇ ನಿಲ್ದಾಣ ಬಳಿ ನಿರ್ಮಿಸುವ ಅಂಡರ್ ಪಾಸ್ ಮೂಲಕ ಕಾಸರಗೋಡು ಭಾಗದ ವಾಹನಗಳಿಗೆ ಸರ್ವಿಸ್ ರಸ್ತೆ ಮೂಲಕ ಕುಂಬಳೆ ನಿಲ್ದಾಣಕ್ಕೆ ತಲುಪಬಹುದೆಂದು ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ತಿಳಿಸಿರುತ್ತದೆ. ಅದೇ ರೀತಿ ಕುಂಬಳೆ ಬಸ್ ನಿಲ್ದಾಣದಿಂದ ಮಂಗಳೂರು ಭಾಗಗಳಿಗಿಲ್ಲಿರುವ ವಾಹನಗಳು ಇದೇ ಸರ್ವೀಸ್ ರಸ್ತೆ ಮೂಲಕ ಅಂಡರ್ಪಾಸ್ ದಾಟಿ ಮಂಗಳೂರು ಭಾಗಕ್ಕೆ ತೆರಳಬಹುದಾದ ರೀತಿಯಲ್ಲಿ ರಸ್ತೆ ನಿರ್ಮಾಣ ತ್ವರಿತಗತಿಯಲ್ಲಿ ಸಾಗುತ್ತಿದೆ. ಈ ವ್ಯವಸ್ಥೆ ಪ್ರಕಾರ ಕುಂಬಳೆ ರೈಲ್ವೇ ನಿಲ್ದಾಣ ಬಳಿಯಿಂದ ಬಸ್ ನಿಲ್ದಾಣಕ್ಕೆ ಹಾಗೂ ಬಸ್ ನಿಲ್ದಾಣದಿಂದ ಕುಂಬಳೆ ರೈಲ್ವೇ ನಿಲ್ದಾಣಕ್ಕಿರುವ ಸರ್ವಿಸ್ ರಸ್ತೆಯಲ್ಲಿ ಒಮ್ಮೆಗೆ ಒಂದು ಭಾಗಕ್ಕಿರುವ ವಾಹನ ಸಂಚಾರಕ್ಕೆ ಮಾತ್ರವೇ ಸೌಕರ್ಯವಿದೆ ಎಂಬುವುದು ನಾಗರಿಕರು, ವಾಹನ ಚಾಲಕರು ಹಾಗೂ ಪ್ರಯಾಣಿಕರನ್ನು ಆತಂಕಕ್ಕೀಡುಮಾಡು ತ್ತಿದೆ. ಈ ಭಾಗಕ್ಕೆ ಎರಡು ಲೈನ್ ಸರ್ವಿಸ್ ರಸ್ತೆ ನಿರ್ಮಿಸಿದರೆ ಒಂದರಲ್ಲಿ ಬಸ್ ನಿಲ್ದಾಣಕ್ಕೆ ಹಾಗೂ ಮತ್ತೊಂದರಲ್ಲಿ ರೈಲ್ವೇ ನಿಲ್ದಾಣ ಬಳಿಗೂ ಸುಗಮವಾಗಿ ಪ್ರಯಾಣಿಸಲು ಸಾಧ್ಯವಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಆದರೆ ಆ ರೀತಿಯ ವ್ಯವಸ್ಥೆ ಏರ್ಪಡಿಸುವ ಕುರಿತು ಅಧಿಕಾರಿಗಳೋ, ರಾಜಕಾರಣಿಗಳೋ ಮಾತನಾಡದಿರುವುದು ನಾಗರಿಕರ ಆತಂಕ ಹೆಚ್ಚಲು ಕಾರಣವಾಗಿದೆ. ರಸ್ತೆ ನಿರ್ಮಾಣ ವೇಳೆಯೇ ಈ ವಿಷಯವನ್ನು ಪರಿಗಣಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ.