ಕುಖ್ಯಾತ ಕಳವು ಆರೋಪಿ ಬಂಡಿಚೋರ್ ರತೀಶ್ ಬಂಧನ
ಕಾಸರಗೋಡು: ವೆಳ್ಳೇರಿಕುಂಡ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾದ ಕುಖ್ಯಾತ ಕಳ್ಳನನ್ನು ಪೊಲೀಸರು 48 ಗಂಟೆಯೊಳಗೆ ಸೆರೆ ಹಿಡಿದಿದ್ದಾರೆ. ಪನತ್ತಡಿ ಪಾಣತ್ತೂರು ಪಟ್ಟುವಂ ನಿವಾಸಿ ರತೀಶ್ ಯಾನೆ ಬಂಡಿಚೋರ್ ರತೀಶ್ (67) ಎಂಬಾತನನ್ನು ವೆಳ್ಳೇರಿಕುಂಡ್ ಪೊಲೀಸರು ಬಂಧಿಸಿದ್ದಾರೆ. ಪರಪ್ಪದ ತಾಲೂಕು ಲೈಬ್ರರಿ ಕೌನ್ಸಿಲ್ ಕಚೇರಿ ಹಾಗೂ ಮಲಬಾರ್ ಹೋಟೆಲ್ ಎಂಬೆಡೆಗಳಿಂದ ಇತ್ತೀಚೆಗೆ ಕಳವು ನಡೆದಿತ್ತು. ಕಾಞಂಗಾಡ್ ಡಿವೈಎಸ್ಪಿ ಬಾಬು ಪೆರಿಂಗೋತ್ರ ಮೇಲ್ನೋಟದಲ್ಲಿ ನಡೆದ ತನಿಖೆಯಲ್ಲಿ ಆರೋಪಿ ಕುರಿತು ಸುಳಿವು ಲಭಿಸಿತ್ತು. ಕೂಡಲೇ ವೆಳ್ಳೇರಿಕುಂಡ್ ಎಸ್.ಐ.ಗಳಾದ ಶ್ರೀದಾಸ್, ಜಯರಾಜನ್, ಗ್ರೇಡ್ ಎಸ್.ಐ. ರಾಜನ್, ಪೊಲೀಸ್ ಅಧಿಕಾರಿಗಳಾದ ಅಬೂಬಕ್ಕರ್, ನೌಶಾದ್ ಎಂಬಿವರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ. ಕೊಲೆ ಪ್ರಕರಣಗಳು ಸಹಿತ ಹಲವು ಪ್ರಕರಣಗಳಲ್ಲಿ ಬಂಡಿಚೋರ್ ರತೀಶ್ ಆರೋಪಿ ಯಾಗಿದ್ದಾನೆ. ಎರ್ನಾಕುಳಂ, ತೃಶೂರು ಜಿಲ್ಲೆಗಳಲ್ಲಿನಡೆದ ಹಲವು ಕಳವು ಪ್ರರಕಣಗಳಲ್ಲೂ ಈತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನಿನ್ನೆ ಅಪರಾಹ್ನ ಪರಪ್ಪದಲ್ಲಿ ಕಳವಿಗೀಡಾದ ಸ್ಥಳಗಳಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಗಿದೆ.