ಖಾಸಗಿ ಬಸ್‌ಗಳ ಸೂಚನಾ ಮುಷ್ಕರ ತೀವ್ರಗೊಂಡ ಸಂಚಾರ ಸಮಸ್ಯೆ

ಕಾಸರಗೋಡು: ಖಾಸಗಿ ಬಸ್ ಮಾಲಕರು ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಇಂದು ರಾಜ್ಯದಾದ್ಯಂತ ಬಸ್ ಮುಷ್ಕರ ನಡೆಸುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದ ಆರಂಭಗೊಂಡ ಮುಷ್ಕರ ಇಂದು ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ವಿದ್ಯಾರ್ಥಿಗಳ ಪ್ರಯಾಣ ದರ ಹೆಚ್ಚಿಸಬೇಕೆಂಬುವುದಾಗಿದೆ ಬಸ್ ಮಾಲಕರ ಪ್ರಧಾನ ಬೇಡಿಕೆಯಾಗಿದೆ. ಅದೇ ರೀತಿ ಬಸ್‌ಗಳಲ್ಲಿ ಕ್ಯಾಮರಾ, ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದ ಸರಕಾರದ ನಿರ್ಧಾರವನ್ನು ಬಸ್ ಮಾಲಕರು ವಿರೋಧಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಿಸದಿದ್ದಲ್ಲಿ ನವೆಂಬರ್ ೨೧ರಿಂದ  ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಬಸ್ ಮಾಲಕರ ಸಂಯುಕ್ತ ಸಮಿತಿ ನಿರ್ಧರಿಸಿದೆ.

ಇದೇ ವೇಳೆ ಇಂದಿನ ಬಸ್ ಮುಷ್ಕರದಿಂದ ಖಾಸಗಿ ಬಸ್‌ಗಳನ್ನೇ ಆಶ್ರಯಿಸುವ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ವಿವಿಧ ಅಗತ್ಯಗಳಿಗಾಗಿ ವಿವಿಧ ಭಾಗಗಳಿಗೆ ತೆರಳುವವರು ಬಸ್ ಸೌಕರ್ಯವಿಲ್ಲದೆ ಸಮಸ್ಯೆಗೀಡಾಗಿದ್ದಾರೆ. ಖಾಸಗಿ ಬಸ್‌ಗಳು ಮಾತ್ರವೇ ಸಂಚರಿಸುವ ರೂಟ್‌ಗಳಲ್ಲಿ ಸಮಸ್ಯೆ ತೀವ್ರಗೊಂಡಿದೆ. ಇದರಿಂದ ಟ್ಯಾಕ್ಸಿ ವಾಹನಗಳನ್ನು ಆಶ್ರಯಿಸಬೇಕಾಗಿ ಬಂದಿದೆ. ರಾಷ್ಟ್ರೀಯ ಹೆದ್ದಾರಿ, ಅಂತಾರಾಜ್ಯ ರಸ್ತೆಗಳಲ್ಲಿ ಕೆಎಸ್‌ಆರ್ ಟಿಸಿ ಬಸ್‌ಗಳು ಸಂಚರಿಸುತ್ತಿರುವುದರಿಂದ ಆ ಪ್ರದೇಶಗಳ ಪ್ರಯಾಣಿಕರು ಸಮಸ್ಯೆ ಯಿಂದ ಅಲ್ಪ ಮಟ್ಟಿಗೆ  ಪಾರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ದೂರದ ಸ್ಥಳಗಳಿಗೆ ತೆರಳುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಮಸ್ಯೆ ಹೆಚ್ಚಾಗಿ ಎದುರಾಗಿದೆ.

ರಾಜ್ಯದಲ್ಲಿ  ಎಂಟು ಸಾವಿರದಷ್ಟು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಆ ಎಲ್ಲಾ ಬಸ್‌ಗಳು ಇಂದಿನ ಮುಷ್ಕರದಲ್ಲಿ ಪಾಲ್ಗೊಂಡಿವೆ.

Leave a Reply

Your email address will not be published. Required fields are marked *

You cannot copy content of this page