ಚಲನಚಿತ್ರರಂಗದಲ್ಲಿ ಮಹಿಳೆಯರ ಶೋಷಣೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕಾಸರಗೋಡು: ಮಲೆಯಾಳ ಸಿನಿಮಾ ವಲಯದಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ನೀತಿ, ಶೋಷಣೆ, ಲೈಂಗಿಕ ಆಕ್ರಮಣಗಳ ಭಯಾನಕವಾದ ಕತೆಗಳು ಹೇಮಾ ಕಮಿಶನ್ ವರದಿಯಲ್ಲಿ ಬಹಿರಂಗಗೊಂಡಿದ್ದು, ರಾಜ್ಯದ ಓರ್ವ ಶಾಸಕ ಹಾಗೂ ಖ್ಯಾತ ನಟ ಸಹಿತ ಹಲವರು ಆರೋಪಕ್ಕೆಡೆಯಾದ ಘಟನೆಯಲ್ಲಿ ರಾಜ್ಯ ಸರಕಾರ ತೋರಿಸುವ ಅನಾಸ್ಥೆ ನಾಚಿಕೆಗೇಡು ಎಂದು ಮಾಜಿ ಡಿಸಿಸಿ ಅಧ್ಯಕ್ಷ ಕೆ.ಪಿ. ಕುಂಞಿಕಣ್ಣನ್ ಆರೋಪಿಸಿದರು.
ಹೇಮಾ ಕಮಿಶನ್ ವರದಿಯಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು, ಆರೋಪಕ್ಕೆಡೆಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಸಾಂಸ್ಕೃತಿಕ ಸಚಿವ ಸಜಿ ಚೆರಿಯಾನ್ ರಾಜೀನಾಮೆ ನೀಡಬೇಕು, ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ರ ಸಹಭಾಗಿತ್ವ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕೆಪಿಸಿಸಿಯ ಆಹ್ವಾನ ಪ್ರಕಾರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಸಿದ ಪ್ರತಿಭಟನಾ ಒಕ್ಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಡಿಸಿಸಿ ಉಪಾಧ್ಯಕ್ಷ ಪಿ.ಜಿ. ದೇವ್ ಅಧ್ಯಕ್ಷತೆ ವಹಿಸಿದರು. ಹಕೀಂ ಕುನ್ನಿಲ್, ಕೆ. ನೀಲಕಂಠನ್, ಪಿ.ಎ. ಅಶ್ರಫಲಿ ಸಹಿತ ಹಲವರು ಮಾತನಾಡಿದರು.