ಚುನಾವಣೆ: ಜ್ಯೋತಿಷ್ಯರಿಗೂ ಬಿಡುವಿಲ್ಲದ ಕಾಲ
ಕಾಸರಗೋಡು: ಚುನಾವಣೆ ಕಾಲ ರಾಜಕೀಯದವರಿಗೆ ಮಾತ್ರವಲ್ಲ, ಜ್ಯೋತಿಷ್ಯರಿಗೂ ಬಿಡುವಿಲ್ಲದ ಸಮಯವಾಗಿದೆ. ದಿನ ಹಾಗೂ ಸಮಯವನ್ನು ನಿಗದಿಪಡಿಸಿ ನಾಮಪತ್ರಿಕೆ ಸಲ್ಲಿಸಬೇಕೆಂದು ಉದ್ದೇಶಿಸಿರುವ ಅಭ್ಯರ್ಥಿಗಳು ರಾಜ್ಯದ ಒಳಗೂ ಹೊರಗೂ ಹಲವರಿದ್ದಾರೆ. ಖ್ಯಾತ ಜ್ಯೋತಿಷ್ಯರಿಂದ ಮುಹೂರ್ತ ಪಡೆದು ನಾಮಪತ್ರಿಕೆ ಸಲ್ಲಿಸುವ ತೀರ್ಮಾನವನ್ನು ಹಲವರು ಕೈಗೊಂಡಿದ್ದಾರೆ.
ನಿನ್ನೆಯಿಂದ ಜ್ಯೋತಿಷ್ಯರನ್ನು ಹುಡುಕಿ ಅಭ್ಯರ್ಥಿಗಳು, ಮುಖಂಡರ ಫೋನ್ ಕಾಲ್ಗಳು ಬರಲಾರಂಭಿಸಿವೆ. ಹೆಸರು, ಜನನ ದಿನಾಂಕ, ನಕ್ಷತ್ರವನ್ನೆಲ್ಲಾ ಫೋನ್ನಲ್ಲಿ ತಿಳಿಸಿ ನಾಮಪತ್ರಿಕೆ ನೀಡಬೇಕಾದ ಸಮಯ ತಿಳಿಸಲು ಆಗ್ರಹಿಸುತ್ತಿದ್ದಾರೆ.
ಸಮಯವನ್ನು ಬರೆದ ಚೀಟಿ ಪಡೆಯಲು ಅಭ್ಯರ್ಥಿಗಳು ತಮ್ಮ ನಂಬಿಗಸ್ತನಾದ ಬೆಂಬಲಿಗ ನನ್ನು ಜ್ಯೋತಿಷ್ಯರ ಬಳಿ ಕಳುಹಿಸಿಕೊಡುವರು. ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯರು ಕೂಡಾ ಉತ್ತಮ ಗಳಿಗೆ ಕಂಡು ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.