ಚೆರ್ಕಳ ಪೇಟೆಯಲ್ಲಿ ಘರ್ಷಣೆ: ಮೊಬೈಲ್ ಫೋನ್ ಅಂಗಡಿ ಹಾನಿ; ನಾಲ್ವರಿಗೆ ಗಾಯ
ಚೆರ್ಕಳ: ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ಕಾರನ್ನು ಅಲ್ಲಿಂದ ತೆರವುಗೊಳಿಸುವ ವಿಷಯದಲ್ಲಿ ಯುವಕರ ಮಧ್ಯೆ ಉಂಟಾದ ಮಾತಿನ ಚಕಮಕಿ ಬಳಿಕ ಹಿಂಸೆಗೆ ತಿರುಗಿ ತಲ್ವಾರ್ ಬೀಸಿದ ಪರಿಣಾಮ ನಾಲ್ವರು ಗಾಯ ಗೊಂಡು, ಮೊಬೈಲ್ ಅಂಗಡಿಯ ಮೇಲೂ ದಾರಿ ನಡೆಸಿ ಹಾನಿಗೊಳಿಸಿದ ಘಟನೆ ಚೆರ್ಕಳದಲ್ಲಿ ನಡೆದಿದೆ. ಚೆರ್ಕಳ ಬಾಲನಡ್ಕದ ಬಿ.ಎ. ಹಕೀಂ ಎಂಬವರ ಅಂಗಡಿಯನ್ನು ಆಕ್ರಮಿಗಳ ತಂಡ ಹೊಡೆದು ಹಾನಿಗೊಳಿಸಿದೆ.
ಚೆರ್ಕಳ ಪೇಟೆಯ ಮಸೀದಿ ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಹಕೀಂರ ಮಾಲಕತ್ವದಲ್ಲಿರುವ ಮಸೀದಿ ಸಮೀಪದ ಎಬಿಸಿಡಿ ಎಂಬ ಹೆಸರಿನ ಮೊಬೈಲ್ ಅಂಗಡಿಯ ಸಿಬ್ಬಂದಿ ಅಸೈನಾರ್ ಎಂಬವರು ಅಲ್ಲೇ ಪಕ್ಕ ಕಾರು ನಿಲ್ಲಿಸಿದ್ದರು. ಅದನ್ನು ಅಲ್ಲಿಂದ ತೆರವುಗೊಳಿಸುವಂತೆ ಇನ್ನೊಂದು ಕಾರಿನಲ್ಲಿದ್ದ ಯುವಕನೋರ್ವ ಆಗ್ರಹಪಟ್ಟನ. ಆಗ ಅಲ್ಲಿ ಅವರಿಬ್ಬರ ಮಧ್ಯೆ ವಾಗ್ವಾದ ಉಂಟಾಗಿದ್ದು, ನಂತರ ಅಸೈನಾರ್ ತನ್ನ ಕಾರನ್ನು ತೆರವುಗೊಳಿಸಿದರು. ಆಗ ಇನ್ನೊಂದು ಕಾರಿನಲ್ಲಿದ್ದ ಯುವಕ ಅಲ್ಲಿಂದ ತೆರಳಿ ಅಲ್ಪ ಸಮಯದ ಬಳಿಕ ತಲ್ವಾರಿನೊಂದಿಗೆ ಮತ್ತೆ ಚೆರ್ಕಳಕ್ಕೆ ಆಗಮಿಸಿ ಅಸೈನಾರ್ ದುಡಿಯುತ್ತಿರುವ ಮೊಬೈಲ್ ಅಂಗಡಿಗೆ ನುಗ್ಗಿ ಆತನ ಮೇಲೆ ಹಲ್ಲೆ ನಡೆಸಿದನೆಂದೂ ಆಗ ಅಸೈನಾರ್ ಜೋರಾಗಿ ಬೊಬ್ಬೆ ಹಾಕತೊಡಗಿದಾಗ ಹಿಂಸಾಚಾರವನ್ನು ತಡೆಯಲೆತ್ನಿಸಿದ ಚೆರ್ಕಳದ ಸೈಫುದ್ದೀನ್ (28), ಜಲೀಲ್ (28) ಮತ್ತು ಸುಹೈಲ್ (30) ಎಂಬವರು ಗಾಯಗೊಂಡರು. ಬಳಿಕ ಆ ನಾಲ್ವರನ್ನು ಚೆರ್ಕಳದ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಿ ಅಲ್ಲಿ ದಾಖಲಿಸಲಾಯಿತು.
ಕಾರಿನಲ್ಲಿ ಬಂದು ಹಲ್ಲೆ ನಡೆಸಿದ ಯುವಕ ನಂತರ ಅಲ್ಲಿಂದ ಹಿಂತಿರುಗಿ ಸಂಜೆ ೬ ಗಂಟೆಗೆ ಇತರ ನಾಲ್ವರ ಜೊತೆ ಪುನಃ ಬಂದು ಆ ಮೊಬೈಲ್ ಅಂಗಡಿಯ ಗ್ಲಾಸ್ ಮತ್ತು ಪೀಠೋಪಕರಣಗಳು ಸೇರಿ ಇತರ ಸಾಮ ಗ್ರಿಗಳನ್ನು ಧ್ವಂಸಗೊಳಿಸಿ ದನೆಂದು ಆರೋಪಿಸಲಾಗಿದೆ.
ಆಗ ಊರವರು ಮತ್ತು ಆ ಪರಿಸರದ ವ್ಯಾಪಾರಿಗಳು ಸೇರಿ ದಾಳಿ ನಡೆಸಿದವರ ಪೈಕಿ ಮೂವರನ್ನು ಸುತ್ತುವರಿದು ತಡೆದು ನಿಲ್ಲಿಸಿ ಅವರನ್ನು ಬಳಿಕ ವಿದ್ಯಾನಗರ ಪೊಲೀಸರಿಗೆ ಹಸ್ತಾಂತರಿಸಿದರು. ಆದರೆ ಈ ದಾಳಿಗೆ ನೇತೃತ್ವ ನೀಡಿದ ಯುವಕ ನೌಫಲ್ ಎಂಬಾತ ತನ್ನ ಕಾರಿನೊಂದಿಗೆ ಅಲ್ಲಿಂದ ತಪ್ಪಿಸಿಕೊಂಡನೆಂದು ದೂರಲಾಗಿದೆ.
ಈ ದಾಳಿಯಲ್ಲಿ ಗಾಯಗೊಂಡ ಅಸೈನಾರ್ ಮತ್ತು ಮೊಬೈಲ್ ಅಂಗಡಿಯ ಮಾಲಕ ಬಿ.ಎಂ. ಹಕೀಂ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ನೆಲ್ಲಿಕಟ್ಟೆಯ ನೌಫಲ್ ತನ್ವೀರ್ (28), ರಾಫಿ (22), ನೌಫಲ್ (23) ಮತ್ತು ಅರಾಫತ್ (23) ಎಂಬವರ ವಿರುದ್ಧ ಕೇಸು ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೊಬೈಲ್ ಅಂಗಡಿಯನ್ನು ಹೊಡೆದು ಹಾನಿಗೊಳಿಸಿ, ನೌಕರರ ಮೇಲೆ ಹಲ್ಲೆ ನಡೆಸಿದ ದುಷ್ಕೃತ್ಯವನ್ನು ಪ್ರತಿಭಟಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಚೆರ್ಕಳ ಘಟಕ ನೀಡಿದ ಆಹ್ವಾನದಂತೆ ಚೆರ್ಕಳದಲ್ಲಿ ವ್ಯಾಪಾರಿಗಳು ಇಂದು ಬೆಳಿಗ್ಗೆ 10 ಗಂಟೆಗೆ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಿ ಹರತಾಳ ಆರಂಭಿಸಿದ್ದಾರೆ. ಹರತಾಳ ಮಧ್ಯಾಹ್ನ 1 ಗಂಟೆ ತನಕ ಮುಂದುವರಿಯಲಿದೆ.