ಟ್ಯಾಂಕರ್ ಲಾರಿಯಿಂದ ರಸ್ತೆಗೆ ಹರಿದ ಆಹಾರದೆಣ್ಣೆ : ಗಂಟೆಗಳ ತನಕ ಮೊಟಕುಗೊಂಡ ವಾಹನ ಸಂಚಾರ
ಕಾಸರಗೋಡು: ಆಹಾರದೆಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್‌ನಲ್ಲಿ ಸೋರಿಕೆ ಉಂಟಾಗಿ ಎಣ್ಣೆ ರಸ್ತೆಗೆ ಹರಿದ ಪರಿಣಾಮ ಗಂಟೆಗಳಕಾಲ ಸಾರಿಗೆ ಅಡಚಣೆ ಉಂಟಾದ ಘಟನೆ ನಗರದ ಹೊಸ ಬಸ್ ನಿಲ್ದಾಣ ಸರ್ಕಲ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಮಂಗಳೂರು ಭಾಗದಿಂದ ಕಣ್ಣೂರಿ ನತ್ತ ಸಾಗುತ್ತಿದ್ದ ಟ್ಯಾಂಕರ್ ಲಾರಿ ನಿನ್ನೆ ರಾತ್ರಿ ಸುಮಾರು 10.30ರ ವೇಳೆ ಹೊಸ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ ಏರು ರಸ್ತೆಗೇರುತ್ತಿರುವಂತೆ ಟ್ಯಾಂಕರ್ ನಿಂದ ಎಣ್ಣೆ ಸೋರಿಕೆ ಉಂಟಾಗಿ ರಸ್ತೆಯಿಡೀ ವ್ಯಾಪಿಸಿತು. ಇದರಿಂದಾಗಿ ಆ ರಸ್ತೆಯಲ್ಲಿ ಇತರವಾಹನಗಳ ಸಂಚಾರ ಮೊಟಕುಗೊಳ್ಳುವಂತಾಯಿತು. ಆ ಬಗ್ಗೆ ಮಾಹಿತಿ ಲಭಿಸಿದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್‌ರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ತಲುಪಿ ನೀರು ಹಾಯಿಸಿ ರಸ್ತೆಯನ್ನು ಎಣ್ಣೆ ಮುಕ್ತಗೊಳಿಸಲೆತ್ನಿಸಿದರೂ ಅದು ಪೂರ್ಣವಾಗಿ ಸಫಲವಾ ಗಲಿಲ್ಲ. ಕೊನೆಗೆ ಜೆಸಿಬಿ ಬಳಸಿ ಎಣ್ಣೆ ಮುಕ್ತಗೊಳಿಸಲಾಯಿತು. ಬಳಿಕ ಅಗ್ನಿಶಾಮಕದಳ ರಸ್ತೆಗೆ ನೀರು ಹಾಯಿಸುವ ಮೂಲಕ ರಸ್ತೆಯನ್ನು ಶುಚೀಕರಿಸಿದರು. ಆ ಬಳಿಕವಷ್ಟೇ ವಾಹನ ಸಂಚಾರ ಪುನರಾರಂಭಗೊಂ ಡಿತು. ನಿನ್ನೆ ರಾತ್ರಿ 10.30ಕ್ಕೆ ಆರಂಭಗೊಂಡ ಶುಚೀಕರಣ ಇಂದು ಮುಂಜಾನೆ 3 ಗಂಟೆ ತನಕ ಮುಂದುವರಿದಿದೆ.
ಅಗ್ನಿಶಾಮಕದಳದ ಫಯರ್‌ಮೆನ್ ಗಳಾದ ಸಾದಿಕ್, ಅಮಲ್‌ರಾಜ್, ಚಾಲಕ ರಮೇಶ ಮತ್ತು ಹೋಂಗಾರ್ಡ್ ಪ್ರವೀಣ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.