ತಾಳ್ತಾಜೆ ನಿವಾಸಿಯ ನಿಗೂಢ ಸಾವು: ಆಂತರಿಕ ಅವಯವಗಳು ರಾಸಾಯನಿಕ ತಪಾಸಣೆಗೆ
ಉಪ್ಪಳ: ಮುಳಿಗದ್ದೆ ತಾಳ್ತಾಜೆ ಕೊರಗಕಾಲನಿಯ ಮತ್ತಡಿ ಎಂಬವರ ಪುತ್ರ ಗೋಪಾಲ (೨೮)ರ ನಿಗೂಢ ಸಾವಿನ ಕುರಿತು ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೃತದೇಹದಿಂದ ಸಂಗ್ರಹಿಸಿದ ರಕ್ತ ಹಾಗೂ ಆಂತರಿಕ ಅವಯವಗಳನ್ನು ರಾಸಾಯನಿಕ ತಪಾಸಣೆಗೊಳಗಾಗಿ ಕಳುಹಿಸಲಾಗಿದೆ. ಅವುಗಳ ತಪಾಸಣೆಯಲ್ಲಿ ಮಾತ್ರವೇ ಸಾವಿನ ಕಾರಣ ತಿಳಿಯಲು ಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೫ರಂದು ಬೆಳಿಗ್ಗೆ ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ಗೋಪಾಲ ೧೦ ಗಂಟೆ ವೇಳೆ ಮರಳಿದ್ದು ಅಸೌಖ್ಯವೆಂದು ತಿಳಿಸಿದ್ದಾನೆನ್ನಲಾಗಿದೆ. ಇದರಂತೆ ಔಷಧಿ ತರಲೆಂದು ಹೊರಟ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಅನಂತರ ಹುಡುಕಾಟ ವೇಳೆ ೬ರಂದು ರಾತ್ರಿ ಪೆರುವೋಡಿ ಕುಡಾನ ಎಂಬಲ್ಲಿನ ನಿರ್ಜನ ಹಿತ್ತಿಲಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಪತ್ತೆಯಾದ ಸ್ಥಳದಿಂದ ಅಲ್ಪ ದೂರದಲ್ಲಿ ಅವರ ಮೊಬೈಲ್ ಹಾಗೂ ಪರ್ಸ್ ಪತ್ತೆಯಾಗಿತ್ತು. ಆದರೆ ಸಾವು ಹೇಗೆ ಸಂಭವಿಸಿದೆ ಎಂದು ತಿಳಿಯಲು ಸಾಧ್ಯವಾಗಿಲ್ಲ.