ತೀವ್ರಗೊಂಡಿರುವ ಮಾದಕವಸ್ತು ದಂಧೆ: ಮಂಜೇಶ್ವರದಲ್ಲಿ 25 ಗ್ರಾಂ ಎಂಡಿಎಂಎ ಸಹಿತ ನಾಲ್ಕು ಮಂದಿ ಸೆರೆ
ಮಂಜೇಶ್ವರ: ಜಿಲ್ಲೆಯಲ್ಲಿ ವಿವಿಧ ರೀತಿಯ ಮಾದಕವಸ್ತು ಸಾಗಾಟ, ಮಾರಾಟ ವ್ಯಾಪಕಗೊಂಡಿದ್ದು, ಇದರ ವಿರುದ್ದ ಪೊಲೀಸ್, ಅಬಕಾರಿದಳದಿಂದ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಮಂಜೇಶ್ವರ ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ 25 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಈ ಸಂಬಂಧ ಓರ್ವ ಕರ್ನಾಟಕ ನಿವಾಸಿ ಸಹಿತ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ೭ ಲಕ್ಷ ರೂಪಾಯಿ ಹಾಗೂ ವಾಹನ ವಶಕ್ಕೆ ತೆಗೆಯಲಾಗಿದೆ.
ಕುಂಜತ್ತೂರು ಉದ್ಯಾವರ ಮಾಡ ಹೌಸ್‌ನ ಅಲ್ಲಾಂ ಇಕ್ಬಾಲ್, ಉಪ್ಪಳ ಶಾರದಾನಗರ ಮಣಿಮುಂಡ ಹೌಸ್‌ನ ಮುಹಮ್ಮದ್ ಫಿರೋಸ್ (22), ಕುಂಜತ್ತೂರು ಮಾಡ ಖಲೀಲ್ ಮಂಜಿಲ್‌ನ ಅನ್ವರ್ ಆಲಿಕುಟ್ಟಿ (36), ಕರ್ನಾಟಕದ ಬನಿತ್ತಂಗಾಡಿ ಕಾಲಿಯ ಎಂಬಲ್ಲಿನ ಮುಹಮ್ಮದ್ ಮನ್ಸೂರ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಸೆರೆಗೀಡಾದ ಮುಹಮ್ಮದ್ ಮನ್ಸೂರ್ ಕರ್ನಾಟಕ ಕೇಂದ್ರೀಕರಿಸಿ ಕಾರ್ಯಾಚರಿಸುವ ಮಾದಕವಸ್ತು ಮಾಫಿಯಾದ ಪ್ರಧಾನ ಕೊಂಡಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಅನ್ವರ್ ವಿದೇಶದಿಂದ ಬಂದು ಊರಿನಲ್ಲಿ ಕೆಲವು ತಿಂಗಳಿಂದ ಮಾದಕವಸ್ತು ಮಾರಾಟ ಗೈಯ್ಯುತ್ತಿದ್ದಾನೆ. ಬಂಧಿತರೆಲ್ಲರೂ ಮಾದಕವಸ್ತು ಮಾರಾಟಗೈದು ಆಡಂಬರ ಜೀವನ ಸಾಗಿಸುತ್ತಿದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ತನಿಖೆಗೊಳಪಡಿಸಿದಾಗ ಕೇರಳ, ಕರ್ನಾಟಕ ಕೇಂದ್ರೀಕರಿಸಿ ಕಾರ್ಯಾ ಚರಿಸುವ ಪ್ರಮುಖ ಮಾಫಿಯಾಗಳ ಕುರಿತು ಮಾಹಿತಿ ಲಭಿಸಿದೆ. ಇದರಿಂದ ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ಮೇಲ್ನೋಟದಲ್ಲಿ ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ಸಿ.ಕೆ ನಿರ್ದೇಶ ಪ್ರಕಾರ ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಅನೂಪ್ ಕುಮಾರ್ ಇ, ಎಸ್.ಐ ಗಳಾದ ರತೀಶ್‌ಗೋಪಿ, ಉಮೇಶ್, ಎಎಸ್‌ಐ ಮಧುಸೂದನನ್ ಎಸ್ , ಸಿಪಿಒಗಳಾದ ಧನೇಶ್, ರಾಜೇಶ್, ಅಬ್ದುಲ್ ಸಲಾಂ, ಅಬ್ದುಲ್ ಶುಕೂರ್, ಸಿಪಿಒ ನಿಜಿನ್ ಕುಮಾರ್, ರಜೀಶ್ ಕಾಟಾಂಬಳ್ಳಿ, ಸಂದೀಪ್ ಸಿ.ಎಚ್, ಅನೀಶ್ ಕುಮಾರ್ ಕೆ.ಎಂ, ಸೋನಿಯ ಎಂಬಿವರು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಮಾದಕವಸ್ತು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.