ತ್ರಿಶೂರಿನಲ್ಲಿ ಸುರೇಶ್ ಗೋಪಿ ಗೆದ್ದು ರಾಜಕೀಯ ಸೂಪರ್ ಸ್ಟಾರ್ ಆಗಬಹುದೇ?
ತ್ರಿಶೂರು: ಈ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರು ಲೋಕಸಭಾ ಕ್ಷೇತ್ರ ಎಲ್ಲರ ಪ್ರಧಾನ ಆಕರ್ಷಣಾ ಕೇಂದ್ರವಾಗಿ ಮಾರ್ಪಟ್ಟಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಮಲಯಾಳಂ ಸಿನೆಮಾ ಸೂಪರ್ ಸ್ಟಾರ್ ಸುರೇಶ್ ಗೋಪಿ ಯನ್ನೇ ಎನ್ಡಿಎ ಉಮೇದ್ವಾರರನ್ನಾಗಿ ಬಿಜೆಪಿ ಕಣಕ್ಕಿಳಿಸಿದೆ. ಅವರ ತಾರಾ ವರ್ಚಸಿನಿಂದ ಈ ಕ್ಷೇತ್ರದಲ್ಲಿ ಗೆದ್ದು ಅದನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ತೀವ್ರ ಯತ್ನದಲ್ಲಿ ಬಿಜೆಪಿ ತೊಡಗಿದೆ.
1951ರಲ್ಲಿ ರೂಪೀಕರಿಸಲ್ಪಟ್ಟ ತ್ರಿಶೂರು ಲೋಕಸಭಾ ಕ್ಷೇತ್ರದಲ್ಲಿ ತ್ರಿಶೂರು, ಒಲ್ಲೂರು, ಪುದುಕ್ಕಾಡ್, ಮನಲೂರು, ಗುರುವಾಯೂರು, ನೆಟ್ಟಿಗಾ ಮತ್ತು ಇರಿಞಾಲಿಕುಡ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ.
2019ರಲ್ಲಿ ಈ ಕ್ಷೇತ್ರದ ಯುಡಿಎಫ್ (ಕಾಂಗ್ರೆಸ್)ನ ಟಿ.ಎನ್. ಪ್ರತಾಪನ್ 4,15,089 (ಶೇ.39.83) ಮತ ಪಡೆದು ಗೆಲುವು ಸಾಧಿಸಿದ್ದರು.
ಎಡರಂಗದ (ಸಿಪಿಐ) ರಾಜಾಜಿ ಮ್ಯಾಥ್ಯು ಥೋಮಸ್ 3,21,456(ಶೇ. 30.855) ಮತ್ತು ಬಿಜೆಪಿ (ಎನ್ಡಿಎ)ಯ ನಟ ಸುರೇಶ್ ಗೋಪಿ 2,93,822 (ಶೇ.28.19) ಮತ ಗಳಿಸಿದ್ದರು. 2014ರಲ್ಲಿ ಈ ಕ್ಷೇತ್ರದಲ್ಲಿ ಎಡರಂಗ (ಸಿಪಿಐ)ನ ಎಸ್ ಜಯದೇವನ್ ಗೆದ್ದಿದ್ದರು. ಅದರ ಮೊದಲು 2009ರಲ್ಲಿ ಕಾಂಗ್ರೆಸ್ನ ಪಿ.ಸಿ. ಚಾಕೊ ಗೆದ್ದಿದ್ದಾರೆ.
ಇನ್ನು ಈ ಬಾರಿ ಎನ್ಡಿಎ ಉಮೇದ್ವಾರರನ್ನಾಗಿ ಬಿಜೆಪಿ ಮತ್ತೆ ಸುರೇಶ್ ಗೋಪಿಯವರನ್ನೇ ಮತ್ತೆ ಕಣಕ್ಕಿಳಿಸಿದೆ. ಮಾತ್ರವಲ್ಲ ಅವರ ಮೂಲಕ ಕ್ಷೇತ್ರದಲ್ಲಿ ಗೆಲ್ಲಬಹುದೆಂಬ ತುಂಬು ನಿರೀಕ್ಷೆಯನ್ನು ಬಿಜೆಪಿ ವ್ಯಕ್ತಪಡಿಸಿದೆ. ಮಾತ್ರವಲ್ಲ ಸುರೇಶ್ ಗೋಪಿ ಕೂಡಾ ಗೆಲುವಿನ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಇನ್ನು ಎಡರಂಗದ ಅಭ್ಯರ್ಥಿ ಸಚಿವ ವಿ.ಎಸ್. ಸುನಿಲ್ ಕುಮಾರ್ (ಸಿಪಿಐ) ಸ್ಪರ್ಧಾಕಣದಲ್ಲಿದ್ದಾರೆ. ಯುಡಿಎಫ್ ಉಮೇದ್ವಾರರಾಗಿ ಈ ಕ್ಷೇತ್ರದ ಸಂಸದ ಟಿ.ಎನ್. ಪ್ರತಾಪನ್ರನ್ನು ಮತ್ತೆ ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದ್ದರೂ, ಕೊನೆಯ ಕ್ಷಣದಲ್ಲಿ ಅವರನ್ನು ಕೈಬಿಟ್ಟು ಈಗ ವಡಗರೆ ಕ್ಷೇತ್ರದ ಸಂಸದರಾಗಿರುವ ಕೆ. ಮುರಳೀಧರನ್ರಿಗೆ ಅನಿರೀಕ್ಷಿತ ವಾಗಿ ಟಿಕೆಟ್ ನೀಡಿರುವುದು ಟಿ.ಎಸ್. ಪ್ರತಾಪನ್ರಿಗೆ ಮಾರಕ ಪ್ರಹಾರ ನೀಡಿದಂತಾಗಿದೆ. ಅದು ಅವರು ಮತ್ತು ಅವರ ಬೆಂಬಲಿಗರನ್ನು ತೀವ್ರ ನಿರಾಶೆಗೊಳಿಸಿದೆ. ಮಾತ್ರವಲ್ಲದೆ, ಆಕ್ರೋಶಕ್ಕೂ ದಾರಿ ಮಾಡಿಕೊಟ್ಟಿದೆ. ಅದನ್ನು ತಣಿಸಲು ಟಿ.ಎನ್. ಪ್ರತಾಪನ್ರನ್ನು ಕೆಪಿಸಿಸಿ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ನೇಮಿಸಿದ್ದರೂ, ಅದು ಅವರನ್ನು ಸಂತೈಸುವಂತೆ ಮಾಡಲಿದೆಯೇ ಎಂಬುವುದು ಚುನಾವಣಾ ಫಲಿತಾಂಶದಲ್ಲಿ ಫಲ ಫಲಿಸಬಹುದು.
ಟಿ.ಎನ್. ಪ್ರತಾಪನ್ರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿ ರುವುದರಿಂದ ಕಾಂಗ್ರೆಸ್ನಲ್ಲಿ ಉಂಟಾಗಿ ರುವ ಭಿನ್ನಮತ ತಮಗೆ ಅನುಕೂಲ ಕರವನ್ನಾಗಿಸುವ ಪ್ರಯತ್ನದಲ್ಲಿ ಸಿಪಿಐ ಮತ್ತು ಬಿಜೆಪಿ ಇನ್ನೊಂದೆಡೆ ತೊಡಗಿದೆ.
ಈ ಕ್ಷೇತ್ರದಲ್ಲಿ ನಷ್ಟಗೊಂಡ ತಮ್ಮ ಹಳೇ ಪ್ರತಾಪವನ್ನು ಮತ್ತೆ ಮೈಗೂಡಿಸಿ ಈ ಕ್ಷೇತ್ರದಲ್ಲಿ ಮತ್ತೆ ಗೆದ್ದು ಬಗಲಿಗೆ ಹಾಕಿಕೊಳ್ಳುವ ಸರ್ವ ಪ್ರಯತ್ನದಲ್ಲಿ ಸಿಪಿಐಯ ವಿ.ಎಸ್. ಸುನಿಲ್ ಕುಮಾರ್ ಕೂಡಾ ತೊಡಗಿದ್ದಾರೆ. ಇನ್ನೊಂದೆಡೆ ತನ್ನ ತಾರಾವರ್ಚಸ್ಸು ಮತ್ತು ಮೋದಿ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸಿ ಅಚ್ಚರಿ ಯಾಗಿ ಈ ಕ್ಷೇತ್ರದಲ್ಲಿ ಚೊಚ್ಚಲ ಗೆಲುವು ಸಾಧಿಸುವ ಸಕಲ ಪ್ರಯತ್ನದಲ್ಲಿ ಸುರೇಶ್ ಗೋಪಿ ಮತ್ತು ಬಿಜೆಪಿ ತೊಡಗಿದೆ.