ದೇರಂಬಳ ಸಂಕ ಕುಸಿತ: ಸ್ಥಳೀಯರ ಸಂಚಾರಕ್ಕೆ ಇನ್ನೂ ಪರಿಹಾರವಿಲ್ಲ
ಉಪ್ಪಳ: ಮಂಗಲ್ಪಾಡಿ- ಮೀಂಜ ಪಂಚಾಯತ್‌ಗಳನ್ನು ಜೋಡಿಸುವ ದೇರಂಬಳ ಕಾಂಕ್ರೀಟ್ ಸೇತುವೆ ಮುರಿದು ಬಿದ್ದು ಏಳು ತಿಂಗಳು ಕಳೆದರೂ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಉಂಟಾಗಿಲ್ಲ. ೨೦ ವರ್ಷದ ಹಿಂದೆ ನಿರ್ಮಿಸಿದ ಸೇತುವೆ ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದಿತ್ತು. ಸಂಕವಿಲ್ಲದ ಕಾರಣ ಸ್ಥಳೀಯರ ಸಂಚಾರಕ್ಕೆ ಸಂಕಷ್ಟ ಉಂಟಾದಾಗ ತಾತ್ಕಾಲಿಕವಾಗಿ ಕಂಗನ್ನು ಹಾಸಿ ಕಾಲುಸಂಕ ನಿರ್ಮಿಸಲಾಗಿತ್ತು. ಆದರೆ ಅದು ಅಪಾಯಕರ ರೀತಿಯಲ್ಲಿದೆ. ಇದರಿಂದಾಗಿ ವಿದ್ಯಾರ್ಥಿಗಳ ಸಹಿತದ ಊರವರ ಸಂಚಾರಕ್ಕೆ ಸಮಸ್ಯೆಯಾಗಿದೆ.
ಇತ್ತೀಚೆಗೆ ಈ ಸಂಕದಲ್ಲಿ ಸಂಚರಿಸುತ್ತಿದ್ದ ವೇಳೆ ಆಯ ತಪ್ಪಿ ಮಹಿಳೆಯೋರ್ವರು ಬಿದ್ದಿರು ವುದಾಗಿಯೂ ಹೇಳಲಾಗುತ್ತಿದೆ. ಮೀಂಜ ಪಂಚಾಯತ್‌ನ ದೇರಂಬಳ ನಿವಾಸಿಗಳಿಗೆ ಜೋಡುಕಲ್ಲು, ಬೇಕೂರು ಶಾಲೆಗೆ ಹತ್ತಿರದ ದಾರಿಯಾಗಿದ್ದು, ಜೋಡುಕಲ್ಲು, ಮಡಂದೂರು ಪ್ರದೇಶದ ನಿವಾಸಿಗಳಿಗೆ ಚಿಗುರುಪಾದೆ- ಮೀಯಪದವು ಭಾಗಕ್ಕೆ ಸಂಚರಿಸಲು ಈ ಕಾಲುಸಂಕವೇ ಆಶ್ರಯವಾಗಿತ್ತು. ಇಲ್ಲಿ ಶೀಘ್ರವೇ ಸೂಕ್ತ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಂಕ ಮುರಿದು ಬಿದ್ದ ಕಾರಣ ಸ್ಥಳೀಯರ ಸಮಸ್ಯೆಯನ್ನು ಪರಿಗಣಿಸಿ ನವಕೇರಳ ಸಭೆಯಲ್ಲಿ ಮೀಂಜ ಪಂಚಾಯತ್ ಅಧ್ಯಕ್ಷೆ ಮನವಿ ನೀಡಿದ್ದರು. ಆದರೆ ಈ ವಿಷಯದಲ್ಲಿ ಪಂಚಾಯತ್‌ಗೆ ಏನು ಮಾಡಬಹುದಾಗಿ ತಿಳಿಸಲು ಸೂಚಿಸಲಾಗಿತ್ತು. ಬೃಹತ್ ಮೊತ್ತ ವೆಚ್ಚವಾಗಬಹುದಾದ ಈ ಸೇತುವೆ ನಿರ್ಮಾಣಕ್ಕೆ ಪಂಚಾಯತ್‌ಗೆ ಅಸಾಧ್ಯವೆಂದು ಸರಕಾರದ ಸಹಾಯವಿದ್ದರೆ ಮಾತ್ರವೇ ಸೇತುವೆ ನಿರ್ಮಾಣ ಸಾಧ್ಯವೆಂದು ಪಂಚಾಯತ್ ತಿಳಿಸುತ್ತಿದೆ.