ದೇಶದ ಭವಿಷ್ಯ ಮಹಿಳೆಯರ ಕೈಯಲ್ಲಿ -ಸಚಿವೆ ಶೋಭಾ ಕರಂದ್ಲಾಜೆ

ಕಾಸರಗೋಡು: ದೇಶದ  ಭವಿಷ್ಯ ಹೊಸ ತಲೆಮಾರಿನ ಕೈಯಲ್ಲಿದೆ ಎಂದೂ, ಮಹಿಳಾ ಸಬಲೀಕರಣ ರಾಷ್ಟ್ರಶಕ್ತಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಹಿಳಾ ಸಮನ್ವಯ ವೇದಿಕೆಯ ಆಶ್ರಯದಲ್ಲಿ ನಿನ್ನೆ ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆದ ‘ಸ್ತ್ರೀ ಶಕ್ತಿ ಸಂಗಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವೆ ಮಾತನಾಡುತ್ತಿದ್ದರು.

ಭಾರತದ ರಾಷ್ಟ್ರೀಯ ಶಕ್ತಿ  ಬಗ್ಗೆ ಅವಲೋಕನೆ ನಡೆಸಿದಾಗ ಅದರಲ್ಲಿ ಮಹಿಳೆಯರ ಅಪಾರ ಕೊಡುಗೆಗಳನ್ನು ನಾವು ಕಾಣಬಹುದಾಗಿದೆ. ಮಹಿಳೆಯರು ಅಧ್ಯಾವುದೇ ಕ್ಷೇತ್ರಗಳಿಗೆ ಧುಮುಕಿ ಕಾರ್ಯವೆಸಗಿದ್ದರೂ, ಅದರಲ್ಲಿ ಅವರೇ ಪ್ರಥಮ ಸ್ಥಾನಕ್ಕೇರಲಿದ್ದಾರೆಂಬ ಧೃಡ ನಿಶ್ಚಯವನ್ನು ಅವರು ಹೊಂದಬೇಕು. ಅದು ನಮ್ಮ ದೇಶವನ್ನು ಇನ್ನಷ್ಟು ಬಲಿಷ್ಠಗೊಳ್ಳುವಂತೆ ಮಾಡಲಿದೆ ಎಂದೂ ಅವರು ಹೇಳಿದ್ದಾರೆ.

ಮಹಿಳೆಯರು ಅವರ ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದ್ದಲ್ಲಿ ಮುಂದಿನ ೨೫ ವರ್ಷದೊಳಗಾಗಿ ಭಾರತಕ್ಕೆ ವಿಶ್ವರಾಷ್ಟ್ರಗಳ ಮುಂದೆ ಗುರುಸ್ಥಾನ ಲಭಿಸಲಿದೆ ಎಂದೂ ಅವರು ಹೇಳಿದ್ದಾರೆ. ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆಯ ಎರೋನಾಟಿಕಲ್ ಸಿಸ್ಟಮ್ಸ್ ಡೈರೆಕ್ಟರ್ ಜನರಲ್ ಹಾಗೂ ಅಗ್ನಿ-೪ ಮಿಷನ್‌ನ ಪ್ರೋಜೆಕ್ಟ್ ಡೈರೆಕ್ಟರ್ ಆಗಿದ್ದ ಟೆಸಿ ಥೋಮಸ್ ಸೇರಿದಂತೆ ಹಲವರು  ಹಲವು ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ವಿವಿಧ ವಲಯಗಳ ಪ್ರತಿಭಾನ್ವಿತರಾದ ಮಹಿಳೆಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾಸರಗೋಡು ಚಿನ್ಮಯ ಮಿಷನ್‌ನ ಬ್ರಹ್ಮಚಾರಿಣಿ ರೋಜಿಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸರಿತಾ ದಿನೇಶ್, ಗೀತಾ ಬಾಬುರಾಜ್ ಮೊದಲಾದವರು ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page