ನಕಲಿ ಭೂ ದಾಖಲೆಪತ್ರ ಸಲ್ಲಿಸಿ ಸಾಲ ತೆಗೆದು ವಂಚನೆಗೈದ ಪ್ರಕರಣ: ಯೂತ್ ಕಾಂಗ್ರೆಸ್ ನೇತಾರ ಸೆರೆ
ಕಾಸರಗೋಡು: ಜಮೀನಿನ ನಕಲಿ ದಾಖಲುಪತ್ರಗಳನ್ನು ಸಲ್ಲಿಸಿ ಕೆಎಸ್ಎಫ್ಇಯ ಮಾಲಕಲ್ಲು ಶಾಖೆಯಿಂದ ೭೦ ಲಕ್ಷ ರೂ. ಸಾಲ ಪಡೆದು ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಕಾಂಗ್ರೆಸ್ ಜಿಲ್ಲಾ ನೇತಾರನನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ.
ಯೂತ್ ಕಾಂಗ್ರೆಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೊಸದುರ್ಗ ಚಿತ್ತಾರಿ ಪಿ.ವಿ. ರಸ್ತೆಯ ಕೆ.ವಿ. ಹೌಸ್ನ ಎಂ. ಇಸ್ಮಾಯಿಲ್ (೩೭)ನನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಸ್ಮಾಯಿಲ್ ಸೇರಿದಂತೆ ಒಟ್ಟು ೮ ಮಂದಿ ವಿರುದ್ದ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಸ್ಮಾಯಿಲ್ ಆತನ ಹಾಗೂ ಸ್ನೇಹಿತರ ಹೆಸರಲ್ಲಿ ಕೆಎಸ್ಎಫ್ಇಗೆ ನಕಲಿ ದಾಖಲುಪತ್ರ ಸಲ್ಲಿಸಿ ಸಾಲ ಪಡೆದು ವಂಚನೆಗೈದಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಇಸ್ಮಾಯಿಲ್ ಮತ್ತು ಇತರ ಎಂಟು ಮಂದಿ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
ಉಪ್ಪಳ ಗ್ರಾಮದ ಐದು ಎಕ್ರೆ ಜಮೀನಿನ ದಾಖಲುಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಅದಕ್ಕೆ ಗ್ರಾಮಾಧಿಕಾರಿಯ ಡಿಜಿಟಲ್ ಸಹಿ ಹಾಕಿ ನೀಡಿ ಕೆಎಸ್ಎಫ್ಇಯ ಚಿಟ್ ಫಂಡ್ನಿಂದ ಆರೋಪಿಗಳು ೭೦ ಲಕ್ಷ ರೂ. ಸಾಲ ಪಡೆದು ವಂಚನೆಗೈದ ಬಗ್ಗೆ ಲಭಿಸಿದ ದೂರಿನಂತೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ಪಡೆದ ಸಾಲವನ್ನು ಮರುಪಾವತಿಸದೇ ಇದ್ದಾಗ ಆರೋಪಿಗಳು ಸಲ್ಲಿಸಿದ ಭೂದಾಖಲು ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿಯಾಗಿ ತ್ತೆಂಬುವುದು ಗಮನಕ್ಕೆ ಬಂದಿದೆಯೆಂದು ತೋರಿಸಿ ಕೆಎಸ್ಎಫ್ಇಯ ಶಾಖಾ ಮೆನೇಜರ್ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಈ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈ ಪ್ರಕರಣದ ಇತರ ಆರೋಪಿಗಳ ಬಂಧನಕ್ಕಾಗಿರುವ ಕ್ರಮ ಮುಂದುವರಿಸಲಾಗಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.