ನರೇಂದ್ರಮೋದಿ ತಿರುವನಂತಪುರದಲ್ಲಿ ಸ್ಪರ್ಧೆ ಸಾಧ್ಯತೆಯನ್ನು ಅಲ್ಲಗಳೆಯದ ಬಿಜೆಪಿ

ನವದೆಹಲಿ: ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ತಿರುವನಂತ ಪುರದಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ಬಿಜೆಪಿ ನೇತೃತ್ವ ಅಲ್ಲಗಳೆದಿಲ್ಲ.

ಮೋದಿ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವರೇ ಎಂದು ಸುದ್ದಿಗಾರರು ಬಿಜೆಪಿಯ ಕೇರಳ ಘಟಕದ ಹೊಣೆಗಾರಿಕೆ ಹೊಂದಿರುವ ಪ್ರಕಾಶ್ ಜಾವ್ದೇಕರ್‌ರಲ್ಲಿ ಪ್ರಶ್ನಿಸಿದಾಗ ಆ ಸಾಧ್ಯತೆಯನ್ನು ಇಲ್ಲವೆಂದು ಹೇಳಲಾಗುತ್ತಿಲ್ಲವೆಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಣಿಪುರ ಹಿಂಸಾಚಾರದ ಹೆಸರಲ್ಲಿ ಕೇರಳದಲ್ಲಿ  ಕ್ರೈಸ್ತರು ಬಿಜೆಪಿಯಿಂದ ದೂರವಾಗಿಲ್ಲ. ಆ ಬಗ್ಗೆ ಕಾಂಗ್ರೆಸ್ ಮತ್ತು ಎಡರಂಗ ನಡೆಸುತ್ತಿರುವ ಪ್ರಚಾರ  ಸಫಲವಾಗದು. ಕೇರಳದಲ್ಲಿ ಬಿಜೆಪಿ ೫ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ತುಂಬು ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಇತರ ರಾಜ್ಯಗಳಲ್ಲಿರುವ ಹಾಗೆಯೇ ಮುಂದಿನ ಚುನಾವಣೆಯಲ್ಲಿ ಕೇರಳದಲ್ಲೂ ಬಿಜೆಪಿ ಭಾರೀ ನಿರೀಕ್ಷೆ ಇರಿಸಿಕೊಂಡಿದೆ. ಹಲವು ಹೊಸ ಮುಖಗಳು ಮಾತ್ರವಲ್ಲ ಹಲವು ಗಣ್ಯರೂ ಬಿಜೆಪಿಗೆ ಶೀಘ್ರ ಸೇರ್ಪಡೆಗೊಳ್ಳಲಿದ್ದಾರೆ. ಮಾತ್ರವಲ್ಲ ಕೇರಳದಲ್ಲಿ ಹಲವು ಅನಿರೀಕ್ಷಿತ ವ್ಯಕ್ತಿಗಳು ಉಮೇದ್ವಾರರಾಗುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರ ಕೇರಳಕ್ಕೆ ಹಲವು ದೊಡ್ಡ ಕೊಡುಗೆಗಳ ಘೋಷಣೆಯನ್ನು ಹೊರಡಿಸಲಿದೆ. ಜನವರಿ ೨ರಂದು ಕೇರಳದ ವಿವಿಧ ಜಿಲ್ಲೆಗಳಲ್ಲಿ ಬೃಹತ್ ಮಹಿಳಾ ಸಮಾವೇಶಗಳನ್ನು  ಬಿಜೆಪಿ ಹಮ್ಮಿಕೊಂಡಿದ್ದು, ಅದರಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಭಾಗವಹಿಸಲಿದ್ದಾರೆ. ಮಾತ್ರವಲ್ಲ ತೆಲಂಗಾನದ ಮಲ್ಕಾಜ್ ಗಿರಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿಯವರನ್ನು ಕಣಕ್ಕಿಳಿಸಲು ಅಲ್ಲಿನ ಬಿಜೆಪಿ ಘಟಕವು ಇನ್ನೊಂದೆಡೆ ಪ್ರಯತ್ನಿಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page