ನವಕೇರಳ ಸಭೆ: ಸಿಪಿಎಂನ ಚುನಾವಣಾ ಪ್ರಚಾರ ಯಾತ್ರೆ- ಬಿಜೆಪಿ

ಕಾಸರಗೋಡು: ನಾಳೆ ಮಂಜೇಶ್ವರದಿಂದ ಆರಂಭಗೊಳ್ಳಲಿರುವ ಸರಕಾರಿ ಮಟ್ಟದ ನವಕೇರಳ ಸಭೆ (ಸದಸ್ಸ್) ಸಿಪಿಎಂನ ಒಂದು ಚುನಾವಣಾ ಪ್ರಚಾರ ಯಾತ್ರೆಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾ. ಕೆ. ಶ್ರೀಕಾಂತ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಸರಕಾರಿ ಸವಲತ್ತುಗಳನ್ನು ಉಪಯೋಗಿಸಿ ಸಿಪಿಎಂನ ಚುನಾವಣಾ ನಿಧಿಗೆ ಜನರಿಂದ ಹತ್ತು ಕೋಟಿ ರೂ.ವನ್ನು ಈ ಕಾರ್ಯಕ್ರಮದ ಮೂಲಕ ಸಂಗ್ರಹಿಸಲಾಗುತ್ತಿದೆ. ಯಾವುದೇ ರೀತಿಯ ಲೆಕ್ಕ ಪತ್ರಗಳನ್ನಾಗಲೀ, ತಯಾರಿಸದೆ ಸ್ಥಳೀಯಾಡಳಿತ ಸಂಸ್ಥೆಗಳು, ಸಾರ್ವಜನಿಕರು, ವ್ಯಾಪಾರಿ ಸಮೂಹ, ಮರಳು- ಶ್ರೀಗಂಧ ಮತ್ತು ಕೋರೆ ಮಾಫಿಯಾಗಳಿಂದಲೂ ಇದರ ಹೆಸರಲ್ಲಿ ಹಣ ಸಂಗ್ರಹಿಸಲಾಗುತ್ತಿದೆ ಎಂದೂ ಶ್ರೀಕಾಂತ್ ಆರೋಪಿಸಿದ್ದಾರೆ.

ರಶೀದಿಯೋ, ಕೂಪನ್‌ಗಳನ್ನೋ ನೀಡದೆ ಅನಧಿಕೃತವಾಗಿ ಈ ಹಣ ಸಂಗ್ರಹ ನಡೆಸಲಾಗುತ್ತಿದೆ. ಇದು ಭ್ರಷ್ಟಾಚಾರವಾಗಿದೆ. ಇದಕ್ಕೆ ಸರಕಾರವೇ ಅವಕಾಶ ಮಾಡಿಕೊಡುತ್ತಿದೆ. ಜನರು ಎದುರಿಸುತ್ತಿರುವ ಜಲಂತ ಸಮಸ್ಯೆಗಳಿಗೆ ನ್ಯಾಯಯುತವಾದ ರೀತಿಯ ಪರಿಹಾರ ಕಂಡುಕೊಳ್ಳದೆ  ಈ ನವಕೇರಳ ಸಭೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಿರುವ ಹಣ ವಸೂಲಿ ಮಾಡುವ ಹೊಣೆಗಾರಿಕೆಯನ್ನು ಉನ್ನತ ಸರಕಾರಿ ಅಧಿಕಾರಿಗಳ ಮತ್ತು ಅವರಿಗಿಂತ ಕೆಳ ಶ್ರೇಣಿಯಲ್ಲಿರುವ ಸಿಬ್ಬಂದಿಗಳಿಗೆ ವಹಿಸಿಕೊಡಲಾಗಿದೆ. ಇಂತಹ ಕಾರ್ಯಕ್ರಮದ ಮೂಲಕ ಸರಕಾರ ಅಧಿಕಾರ ದುರುಪಯೋಗ ನಡೆಸುತ್ತಿದೆ. ಕನಿಷ್ಠ ಒಂದು ರೂಪಾಯಿಯನ್ನಾದರೂ ಮೀಸಲಿರಿಸದೆ ನಡೆಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ಎಲ್ಲಿಂದ ಹಣ ಕಂಡುಕೊಳ್ಳಲಾಗುತ್ತಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ಯಾರಿಂದೆಲ್ಲಾ ಹಣ ಸಂಗ್ರಹಿಸಲಾಗಿದೆ, ಆ ಮೂಲಕ ಎಷ್ಟು ಹಣ ಸಂಗ್ರಹಿಸಲಾಗಿದೆ ಮತ್ತು ಅದನ್ನು ಹೇಗೆ ಖರ್ಚು ಮಾಡಲಾಗುವುದು ಎಂಬುವುದರ ಬಗ್ಗೆ ಸರಿಯಾದ ಲೆಕ್ಕಾಚಾರವನ್ನು ಹೊರಬಿಡಲು ಸಂಬಂಧಪಟ್ಟ ಅಧಿಕಾರಿಗಳು ತಯಾರಾಗದಿರು ವುದಾದರೂ ಯಾತಕ್ಕಾಗಿ ಎಂದೂ ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ಸಾಮಾಜಿಕ ಪಿಂಚಣಿ ಸೇರಿದಂತೆ ಎಲ್ಲಾ ಇತರ ಪಿಂಚಣಿಗಳ ವಿತರಣೆ ಈಗ ಮೊಟಕುಗೊಂಡಿದೆ. ಸಪ್ಲೈಕೋದಲ್ಲಿ ಸಬ್ಸಿಡಿ ದರದಲ್ಲಿ ಅವಶ್ಯಕ ಸಾಮಗ್ರಿಗಳೂ ಲಭಿಸುತ್ತಿಲ್ಲ. ರಾಜ್ಯದ ಎಲ್ಲಾ ವಲಯಗಳೂ ಈಗ ಸ್ಥಂಭನಾವಸ್ಥೆಯಲ್ಲಿದೆ. ಆದ್ದರಿಂದ  ರಾಜ್ಯದ ಜನರು ಈ ನವಕೇರಳ ಸದಸ್ಸ್ ಕಾರ್ಯಕ್ರಮವನ್ನು ತಿರಸ್ಕರಿಸತೊಡಗಿದ್ದಾರೆ. ಇದು ಸರಕಾರಕ್ಕೆ ಚೆನ್ನಾಗಿಯೇ ಮನವರಿಕೆಯಾಗಿದೆ. ಆದ್ದರಿಂದ ರವಿವಾರದಂದು ರಜಾದಿನವಾದರೂ ಅದನ್ನು ರದ್ದುಪಡಿಸಿ ಈ ಕಾರ್ಯಕ್ರಮದಲ್ಲಿ ಸರಕಾರಿ ಸಿಬ್ಬಂದಿಗಳನ್ನು ಪಾಲ್ಗೊಳ್ಳಿಸಲು ಸರಕಾರ ತೀರ್ಮಾನಿಸಿದೆ ಎಂದು ಶ್ರೀಕಾಂತ್ ಆರೋಪಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ರೈ, ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಾಲ್ ಮೊದಲಾದವರೆಲ್ಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page