ನಾಮಪತ್ರದಲ್ಲಿ ಕೇಸಿನ ವಿಷಯ ಮರೆಮಾಚಿದ ಪ್ರಕರಣ: ಪಂಚಾಯತ್ ಸದಸ್ಯನ ಗೆಲುವನ್ನು ಅಸಿಂಧುಗೊಳಿಸಿ ತೀರ್ಪು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಳೆದಬಾರಿ ನಡೆದ ಚುನಾ ವಣೆ ವೇಳೆ ಕೇಸಿನಲ್ಲಿ ಒಳಪಟ್ಟಿರುವ ವಿಷಯವನ್ನು ನಾಮಪತ್ರದ ಜೊತೆಗೆ ಸಲ್ಲಿಸದ ಗ್ರಾಮ ಪಂಚಾಯತ್ ಸದಸ್ಯನ ಗೆಲುವನ್ನು ಕಾಸರಗೋಡು ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯ ಅಸಿಂಧುಗೊಳಿಸಿ ತೀರ್ಪು ನೀಡಿದೆ.

ಉದುಮ ಪಂಚಾಯತ್‌ನ ೧೩ನೇ ವಾರ್ಡ್ (ಅಂಗಕಳರಿ)ನ ಮುಸ್ಲಿಂ ಲೀಗ್ (ಯುಡಿಎಫ್) ಸದಸ್ಯ ಮೊಹಮ್ಮದ್ ಹ್ಯಾರಿಸ್‌ರ ಗೆಲುವನ್ನು ನ್ಯಾಯಾಲಯ  ಅಸಿಂಧುಗೊಳಿಸಿ ತೀರ್ಪು ನೀಡಲಾಗಿದೆ. ಮಾತ್ರವಲ್ಲ ಈ ತೀರ್ಪನ್ನು ರಾಜ್ಯ ಚುನಾವಣಾ ಆಯೋಗ ಹಾಗೂ ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ತಿಳಿಸುವಂತೆ ನ್ಯಾಯಾಲಯ ನಿರ್ದೇಶ ನೀಡಿದೆ.

ಕಳೆದ ಬಾರಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಮೊಹಮ್ಮದ್  ಹ್ಯಾರಿಸ್ ೨೫ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಅವರ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲಿ ೧ ಹಾಗೂ ಹೊಸದುರ್ಗ ಜೆಎಫ್‌ಸಿಎಂ ನ್ಯಾಯಾಲಯದಲ್ಲಿ ಇನ್ನೊಂದು ಕೇಸು ಇದೆಯೆಂದೂ  ಆ ವಿಷಯವನ್ನು ಅವರು   ನಾಮಪತ್ರ ಸಲ್ಲಿಸುವ ವೇಳೆ ತಿಳಿಸದೆ ಮರೆಮಾಚಿದ್ದರೆಂದೂ ಅವರ ವಿರುದ್ಧ ಎಡರಂಗ ಉಮೇದ್ವಾರರಾಗಿ ಸ್ಪರ್ಧಿಸಿದ್ದ ಸಿಪಿಎಂನ ಕೆ.ಎನ್. ಅಬ್ಬಾಸ್ ಅಲಿ ನ್ಯಾಯಾಲಯಕ್ಕೆ ೨೦೨೧ ಜನವರಿ ೧೪ರಂದು ದೂರು ಸಲ್ಲಿಸಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಕೊನೆಗೆ ಮೊಹಮ್ಮದ್ ಹ್ಯಾರಿಸ್‌ರ ಗೆಲುವನ್ನು ಅಸಿಂಧುಗೊಳಿಸಿ ತೀರ್ಪು ನೀಡಿದೆ ಮಾತ್ರವಲ್ಲದೆ ಅಬ್ಬಾಸ್ ಅಲಿಯವರನ್ನು ವಿಜಯಿಯಾಗಿಯೂ ಘೋಷಿಸಿದೆ.

Leave a Reply

Your email address will not be published. Required fields are marked *

You cannot copy content of this page