ನಿದ್ರಿಸುತ್ತಿದ್ದ ಎಂಟರ ಹರೆಯದ ಬಾಲಕಿಯ ಅಪಹರಿಸಿ ಲೈಂಗಿಕ ಕಿರುಕುಳ
ಕೊಚ್ಚಿ: ಆಲುವಾದಲ್ಲಿ ತಿಂಗಳುಗಳ ಹಿಂದೆಯಷ್ಟೇ ಬಿಹಾರದ ವಲಸೆ ಕಾರ್ಮಿಕ ದಂಪತಿಯ ಏಳು ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಪೈಶಾಚಿಕ ರೀತಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಬಳಿಕ ಆಕೆಯನ್ನು ಕುತ್ತಿಗೆ ಹಿಚುಕಿ ಕೊಲೆಗೈದ ಘಟನೆಯ ಕಹಿ ನೆನಪು ಜನರ ಮನಸ್ಸಿನಿಂದ ಇನ್ನೂ ಮಾಸದಿರುವ ವೇಳೆಯಲ್ಲೇ ಅದಕ್ಕೆ ಸಮಾನವಾದ ರೀತಿಯ ಇನ್ನೊಂದು ಘಟನೆ ಆಲುವಾದಲ್ಲಿ ಇಂದು ಮುಂಜಾನೆ ಮತ್ತೆ ನಡೆದಿದೆ.
ಆಲುವಾ ತೊಟ್ಟುಮುಖಂನಲ್ಲಿ ವಾಸಿಸುತ್ತಿರುವ ಬಿಹಾರ ಮೂಲದ ವಲಸೆ ಕಾರ್ಮಿಕ ದಂಪತಿಯ ಎಂಟು ವರ್ಷದ ಬಾಲಕಿಯನ್ನು ಇಂದು ಮುಂಜಾನೆ ಸುಮಾರು ೨ ಗಂಟೆಗೆ ಆಕೆ ವಾಸಿಸುತ್ತಿರುವ ಮನೆಯಿಂದಲೇ ಅಕ್ರಮಿ ಅಪಹರಿಸಿಕೊಂಡು ಹೋಗಿ ಪಕ್ಕದ ಬಯಲಿನಲ್ಲಿ ಆಕೆಗೆ ಪೈಶಾಚಿಕ ರೀತಿಯಲ್ಲಿ ಲೈಂಗಿಕ ಅತ್ಯಾಚಾರ ನಡೆಸಿದ್ದನು. ಆಗ ಬಾಲಕಿ ಜೋರಾಗಿ ಬೊಬ್ಬೆ ಹಾಕುತ್ತಿರುವುದನ್ನು ಕಂಡು ಊರವರು ಅಲ್ಲಿಗೆ ಓಡಿ ಬಂದಾಗ ಬಾಲಕಿಯನ್ನು ನಗ್ನರೀತಿಯಲ್ಲಿ ಪತ್ತೆಹಚ್ಚಿದ್ದಾರೆ. ಕೂಡಲೇ ಊರವರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದ್ದಾರೆ. ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಅಕ್ರಮಿ ಮನೆಯೊಳಗೆ ನುಗ್ಗಿ ಬಾಲಕಿಯನ್ನು ಅಪಹರಿಸಿರುವುದಾಗಿ ಆಕೆಯ ಹೆತ್ತವರು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ಕಿರುಕುಳ ಕ್ಕೊಳಗಾದ ಬಾಲಕಿ ೩ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿ ಮುಂದುವರಿ ಯುತ್ತಿದೆಯೆಂದು ವೈದ್ಯರು ತಿಳಿಸುತ್ತಿದ್ದಾರೆ. ಆಸ್ಪತ್ರೆಯ ಸುತ್ತಲೂ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಬಾಲಕಿಯನ್ನು ಬಳಿಕ ಉನ್ನತ ಮಟ್ಟದ ಚಿಕಿತ್ಸೆಗಾಗಿ ಬಳಿಕ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ. ಇದೇ ವೇಳೆ ಅತ್ಯಾಚಾರವೆಸಗಿರುವುದಾಗಿ ಆರೋಪಿಸಲಾಗುತ್ತಿರುವ ವ್ಯಕ್ತಿಯ ದೃಶ್ಯ ಅಲ್ಲಿ ಪಕ್ಕದ ಸಿಸಿ ಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಅದನ್ನು ಕೇಂದ್ರೀಕರಿಸಿ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.