‘ನಿಮ್ಮ ಮಗಳು ನನಗೆ ಬೇಡ, ನಾನು ಮೂರು ಬಾರಿ ತಲಾಕ್ ನೀಡಿದ್ದೇನೆ’ ಪತ್ನಿಯ ತಂದೆಯ ವಾಟ್ಸಪ್ಗೆ ಸಂದೇಶ ಕಳುಹಿಸಿದ ಯುವಕನನ್ನು ಕೊಲ್ಲಿಯಿಂದ ಊರಿಗೆ ತರಲು ಪೊಲೀಸ್ ಯತ್ನ
ಕಾಸರಗೋಡು: ಪತ್ನಿಯ ತಂದೆಯ ವಾಟ್ಸಪ್ಗೆ ಸಂದೇಶ ಕಳುಹಿಸಿ ಮುತ್ತಲಾಖ್ ಹೇಳಿದ ಪ್ರಕರಣದಲ್ಲಿ ಆರೋಪಿಯಾದ ಬದಿಯಡ್ಕ ನೆಕ್ರಾಜೆ ನೆಲ್ಲಿಕಟ್ಟೆ ನಿವಾಸಿಯನ್ನು ಕೊಲ್ಲಿಯಿಂದ ಊರಿಗೆ ಕರೆತರಲು ಪೊಲೀಸರು ಯತ್ನ ಆರಂಭಿಸಿದ್ದಾರೆ. ಪೊಲೀಸರ ಆಗ್ರಹದಂತೆ ಊರಿಗೆ ಬರದಿದ್ದರೆ ಇಂಟರ್ಪೋಲ್ನ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಲಿರುವ ಕ್ರಮವನ್ನು ಆರಂಭಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ನೆಲ್ಲಿಕಟ್ಟೆ ನಿವಾಸಿ ಹಾಗೂ ಕೊಲ್ಲಿ ಉದ್ಯೋಗಿ ಅಬ್ದುಲ್ ರಜಾಕ್ ಹಾಗೂ ಕಾಞಂಗಾಡ್ ಕಲ್ಲೂ ರಾವಿ ನಿವಾಸಿಯಾದ ಯುವತಿಯ ಮಧ್ಯೆಗಿನ ವಿವಾಹ 2022 ಅಗೋಸ್ತ್ 11ರಂದು ಧಾರ್ಮಿಕ ವಿಧಿಯಂತೆ ನಡೆದಿತ್ತು. 2023 ಅಗೋಸ್ತ್ 23ರ ಬಳಿಕ ಪತಿ ಹಾಗೂ ಮನೆ ಮಂದಿ ವರದಕ್ಷಿಣೆಯಾಗಿ ನೀಡಿದ ಚಿನ್ನಾಭರಣ ಕಡಿಮೆಯಾಗಿದೆಯೆಂದು ಆರೋಪಿಸಿ ಮಾನಸಿಕ ಹಾಗೂ ದೈಹಿಕವಾಗಿ ದೌರ್ಜನ್ಯಗೈಯ್ಯುತ್ತಿದ್ದುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಮಧ್ಯೆ 2025 ಫೆಬ್ರವರಿ 21ರಂದು ಯುವತಿಯ ತಂದೆಯ ವಾಟ್ಸಪ್ಗೆ ‘ನಿಮ್ಮ ಮಗಳು ನನಗೆ ಬೇಡ. ನಾನು ಮೂರು ಬಾರಿ ತಲಾಖ್ ಹೇಳಿದ್ದೇನೆ’ ಎಂಬ ಸಂದೇಶ ಕಳುಹಿಸಿರುವುದ ರೊಂದಿಗೆ ಈತನ ವಿರುದ್ದ ದೂರು ನೀಡಲಾಗಿದೆ. ಅಬ್ದುಲ್ ರಜಾಕ್ರ ಹೊರತಾಗಿ ಮನೆ ಮಂದಿಯಾದ ರುಖಿಯಾ (35), ಫೌಸಿಯಾ (25), ನಫೀಸ (50) ಎಂಬಿವರ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದಾರೆ.