ನೆಲ್ಲಿಕುಂಜೆಯಲ್ಲಿ ರೈಲು ಹಳಿ ಮೇಲೆ ಕಲ್ಲಿರಿಸಿದ್ದು ಇಬ್ಬರು ಮಕ್ಕಳು: ಹೆತ್ತವರನ್ನು ಕರೆದು ತಾಕೀತು ನೀಡಿದ ಪೊಲೀಸರು
ಕಾಸರಗೋಡು: ನಗರದ ನೆಲ್ಲಿಕುಂಜೆಯ ರೈಲು ಹಳಿಯಲ್ಲಿ ಮೊನ್ನೆ ಕಲ್ಲಿರಿಸಿದ ಇಬ್ಬರು ಮಕ್ಕಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ಬಳಿಕ ಹೆತ್ತವರ ಜತೆ ಪೊಲೀಸ್ ಠಾಣೆಗೆ ಕರೆಸಿ ಉಗ್ರ ತಾಕೀತು ನೀಡಿ ನಂತರ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಕಲ್ಲಿರಿಸಿದ್ದು ಮೂರನೇ ಮತ್ತು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ಬಾಲಕರಾಗಿದ್ದಾರೆ. ಕಲ್ಲಿರಿಸಿದವರ ಹಳಿ ಪಕ್ಕ ಮನೆಯಲ್ಲಿ ಗೆಟ್ಟೂ ಸಮಾರಂಭ ನಡೆದಿತ್ತು. ಕಲ್ಲಿರಿಸಿದವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾಗ, ರೈಲು ಹಳಿ ಬಳಿ ಮೆರೂನ್ ಬಟ್ಟೆ ಧರಿಸಿದ ಓರ್ವ ಬಾಲಕನಯನ್ನು ನಾನು ಕಂಡಿದ್ದೆನೆಂದು ಆ ಪರಿಸರದ ಓರ್ವರು ಪೊಲೀಸರಲ್ಲಿ ತಿಳಿಸಿದ್ದರು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ತನಿಖೆಯಲ್ಲಿ ಅಲ್ಲೇ ಪಕ್ಕದ ಗೆಟ್ ಟೂ ಕಾರ್ಯಕ್ರಮ ನಡೆದ ಮನೆಯಲ್ಲಿ ಚಿತ್ರೀಕರಿಸಲಾದ ವೀಡಿಯೋ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಮೆರೂನ್ ಬಣ್ಣದ ಉಡುಪು ಧರಿಸಿದ ಮೂರನೇ ತರಗತಿಯ ವಿದ್ಯಾರ್ಥಿಯನ್ನು ಗುರುತಿಸಿ ಆತನನ್ನು ವಶಕ್ಕೆ ತೆಗೆದು ಪ್ರಶ್ನಿಸಿದಾಗ ಕಲ್ಲಿರಿಸಿದ ಇನ್ನೋರ್ವ ಬಾಲಕನ ಮಾಹಿತಿಯನ್ನು ಆತ ಪೊಲೀಸರಿಗೆ ನೀಡಿದ್ದಾನೆ. ಅದರಂತೆ ಪೊಲೀಸರು ಈ ಇಬ್ಬರು ಮಕ್ಕಳನ್ನು ಅವರ ಹೆತ್ತವರ ಸಹಿತ ಪೊಲೀಸ್ ಠಾಣೆಗೆ ಕರೆಸಿ ಅವರಿಗೆ ಉಗ್ರ ತಾಕೀತು ನೀಡಿ ಬಳಿಕ ಬಿಡುಗಡೆಗೊಳಿಸಿದರು.