ನೈತಿಕ ಪೊಲೀಸ್‌ಗಿರಿ ಸೋಗಿನಲ್ಲಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಪ್ರಕರಣ: ಇಬ್ಬರಿಗೆ ಸಜೆ, ಜುಲ್ಮಾನೆ
ಕಾಸರಗೋಡು: ಹುಟ್ಟು ಹಬ್ಬದ ಸಲುವಾಗಿ ಸಹಪಾಠಿಗಳೊಂದಿಗೆ ಐಸ್ ಕ್ರೀಂ ಸೇವಿಸುತ್ತಿದ್ದ ವಿದ್ಯಾರ್ಥಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ವಿವಿಧ ಸೆಕ್ಷನ್‌ಗಳ ಪ್ರಕಾರ ಒಟ್ಟು ಎರಡು ವರ್ಷ ಒಂಭತ್ತು ತಿಂಗಳ ಸಜೆ ಹಾಗೂ 5೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿ ದಿದ್ದಲ್ಲಿ ಆರೋಪಿಗಳು ಒಂದು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಚೆರ್ಕಳ ತೋಟ್ಟತ್ತಿಲ್ ಹೌಸ್‌ನ ಪಿ.ಎ. ಹ್ಯಾರಿಸ್ ಅಲಿಯಾಸ್ ಮುಳ್ಳು ಹಾರಿಸ್ (36) ಮತ್ತು ಚೆರ್ಕಳ ಬಾಲನಡ್ಕ ಫೈಸಲ್ ಅಲಿಯಾಸ್ ವೈ (35) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಅಂಗಡಿಮೊಗರು ನಿವಾಸಿ ಪೃಥ್ವೀರಾಜ್ ಎಂಬ ವಿದ್ಯಾರ್ಥಿ ತನ್ನ ಹುಟ್ಟು ಹಬ್ಬದ ಸಲುವಾಗಿ 2016 ನವಂಬರ್ 21ರಂದು ಚೆರ್ಕಳದ ಕೂಲ್ ಬಾರ್ ಒಂದರಲ್ಲಿ ತನ್ನ ಸಹಪಾಠಿಗಳೊಂದಿಗೆ ಐಸ್‌ಕ್ರೀಂ ಸೇವಿಸುತ್ತಿದ್ದ ವೇಳ ಅಲ್ಲಿಗೆ ನೈತಿಕ ಪೊಲೀಸ್‌ಗಿರಿಯಲ್ಲಿ ನುಗ್ಗಿ ಬಂದು ಜ್ಯೂಸ್ ಬಾಟಲಿಯಿಂದ ಆತನ ತಲೆ ಹಾಗೂ ಕೈಗೆ ಇರಿದು ಗಾಯಗೊಳಿಸಿದ ದೂರಿನಂತೆ ವಿದ್ಯಾನಗರ ಪೊಲೀಸರು ಈ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಈಗಿನ ಡಿವೈಎಸ್ಪಿ ಬಾಬು ಪೆರಿಂಙೋತ್ತ್ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜೆ.ಚಂದ್ರ ಮೋಹನ್ ಮತ್ತು ನ್ಯಾಯವಾದಿ ಚಿತ್ರಕಲಾ ನ್ಯಾಯಾಲಯದಲ್ಲಿ ವಾದಿಸಿದ್ದರು.