ನ್ಯಾಯಾಲಯಕ್ಕೆ ಸಾಗಿಸುತ್ತಿದ್ದ ವೇಳೆ ರೈಲಿನಿಂದ ಹೊಳೆಗೆ ಹಾರಿದ ಆರೋಪಿ : ಪ್ರಾಣ ಲೆಕ್ಕಿಸದೆ ಪೊಲೀಸರೂ ಹಾರಿ ಸಾಹಸಿಕವಾಗಿ ಸೆರೆ
ಕುಂಬಳೆ: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಕಾಸರ ಗೋಡಿನಿಂದ ಆಲುವಾ ನ್ಯಾಯಾ ಲಯಕ್ಕೆ ಸಾಗಿಸುತ್ತಿದ್ದ ಆರೋಪಿ ದಾರಿ ಮಧ್ಯೆ ರೈಲಿನಿಂದ ಹೊಳೆಗೆ ಹಾರಿ ತಪ್ಪಿಸಲೆತ್ನಿಸಿದ್ದು, ಈ ವೇಳೆ ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೊಳೆಗೆ ಹಾರಿ ಆತನನ್ನು ಅತೀವ ಸಾಹಸಿಕ ರೀತಿಯಲ್ಲಿ ಸೆರೆಹಿಡಿದ ಘಟನೆ ನಡೆದಿದೆ.
ಇಡುಕ್ಕಿ ನಿವಾಸಿ ಸನೀಶ್ (40) ಹೊಳೆಗೆ ಹಾರಿದ ಆರೋಪಿ. ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರಿಂದ ಬಂಧಿತ ನಾದ ಆರೋಪಿಯನ್ನು ಅಲ್ಲಿಂದ ಇಬ್ಬರು ಪೊಲೀಸರ ಭದ್ರತೆಯೊಂ ದಿಗೆ ನಿನ್ನೆ ಮಂಗಳೂರು-ತಿರುವನಂತಪುರ ಏರನಾಡು ಎಕ್ಸ್‌ಪ್ರೆಸ್ ರೈಲಿನಲ್ಲಿ ಆಲುವಾಕ್ಕೆ ಸಾಗಿಸಲಾಗುತ್ತಿತ್ತು. ರೈಲು ಶೊರ್ನೂರು ಭಾರತಪುಳದ ಸೇತುವೆ ಬಳಿ ತಲುಪಿ ದಾಗ ಆರೋಪಿ ತನಗೆ ಶೌಚಾಲಯಕ್ಕೆ ಹೋಗಬೇಕೆಂದು ಪೊಲೀಸರಲ್ಲಿ ತಿಳಿಸಿದ್ದಾನೆ. ಆಗ ಪೊಲೀಸರು ಆತನ ಕೈಗೋಳ ಕಳಚಿ ಶೌಚಾಲಯ ಬಳಿ ಸಾಗಿಸಲೆತ್ನಿಸಿದಾಗ ಆತ ಪೊಲೀಸರ ಕೈಯಿಂದ ತಪ್ಪಿಸಿ ಸೇತುವೆಯಿಂದ ನದಿಗೆ ಹಾರಿದ್ದಾನೆ. ಕೂಡಲೇ ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಆತನ ಹಿಂದೆಯೇ ನದಿಗೆ ಹಾರಿ ಅತೀವ ಸಾಹಸದಿಂದ ಆತನನ್ನು ಸೆರೆಹಿಡಿ ಯುವಲ್ಲಿ ಸಫಲರಾಗಿದ್ದಾರೆ.
ರೈಲು ಆ ಸೇತುವೆ ಮೂಲಕ ಹಾದು ಹೋಗುವ ವೇಳೆ ಅದರ ವೇಗ ಕಡಿಮೆಗೊಳಿಸಲಾಗುತ್ತಿದೆ. ಅದನ್ನು ಸದುಪಯೋಗಪಡಿಸಿ ಆರೋಪಿ ಹೊಳೆಗೆ ಹಾರಿದ್ದನು. ಆದರೆ ನದಿಯಲ್ಲಿ ಹೆಚ್ಚು ನೀರಿರಲಿಲ್ಲ. ಅದರಿಂದ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರಿಗೆ ಸಾಧ್ಯವಾಯಿತು. ಹೊಳೆಗೆ ಹಾರಿದ ಆರೋಪಿ ಕೂಡಲೇ ಪ್ರಜ್ಞಾಹೀನಗೊಂಡಿದ್ದನು. ನಂತರ ಶೊರ್ನೂರಿನಿಂದ ಹೆಚ್ಚುವರಿ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ತೃಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.