ಪತಿಯ ಅಗಲುವಿಕೆಯಿಂದ ಮನನೊಂದ ಗೃಹಿಣಿ ಅಪರಿಮಿತ ಮಾತ್ರೆ ಸೇವಿಸಿ ಮೃತ್ಯು

ಕಾಸರಗೋಡು: ಪತಿಯ ನಿಧನದ ಬಳಿಕ ಮನನೊಂದಿದ್ದ ಪತ್ನಿ ಅಪರಿಮಿತವಾಗಿ ಪ್ರೆಷರ್, ಶುಗರ್ ನಿವಾರಣೆಯ ಮಾತ್ರೆಗಳನ್ನು ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಎಡನೀರಿನ ದಿ| ನಾರಾಯಣ ಎಂಬವರ ಪತ್ನಿ ಲಕ್ಷ್ಮಿ (46) ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರು. ಘಟನೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಪರಿಯಾರಂ ಮೆಡಿಕಲ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಒಂದು ವರ್ಷದ ಹಿಂದೆ ಲಕ್ಷ್ಮಿಯ ಪತಿ ಹೃದಯ ಸಂಬಂಧ ಅಸೌಖ್ಯದಿಂದ ಮೃತಪಟ್ಟಿದ್ದರು. ನಂತರ ಸ್ವಂತ ಮನೆಗೆ ಮರಳಿದ ಲಕ್ಷ್ಮಿ ಸ್ವಲ್ಪ ಕಾಲ ಎಡನೀರಿನ ಕ್ವಾರ್ಟರ್ಸ್‌ವೊಂದಕ್ಕೆ ವಾಸವನ್ನು ಬದಲಿಸಿದ್ದುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಅನಂತರ ಕೂಲಿ ಕೆಲಸ ಮಾಡಿ ಜೀವಿಸುತ್ತಿದ್ದರು. ಬುಧವಾರ ಸಂಜೆ ಲಕ್ಷ್ಮಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ಸಹೋದರನ ಪತ್ನಿ ಪತಿ ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ಅನಂತರ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ಬಳಿಕ ಜನರಲ್ ಆಸ್ಪತ್ರೆಗೆ ತಲುಪಿಸಿ ತಪಾಸಣೆಗೈದಾಗ ಶುಗರ್, ಪ್ರೆಷರ್ ಎಂಬಿವುಗಳ ನಿವಾರಣೆಗಿರುವ ಮಾತ್ರೆಗಳನ್ನು ಅಪರಿಮಿತವಾಗಿ ಸೇವಿಸಿರುವುದೇ ವಾಂತಿ ಹಾಗೂ ಅಸೌಖ್ಯಕ್ಕೆ ಕಾರಣವೆಂದು ತಿಳಿದು ಬಂದಿದೆ. ಅನಂತರ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ನಿಧನ ಸಂಭವಿಸಿದೆ. ಮೃತರು ಸಹೋದರರಾದ ಜನಾರ್ದನ, ಜಗನ್ನಾಥ, ಗೋಪಾಲಕೃಷ್ಣ, ಸೀತಾಲಕ್ಷ್ಮಿ, ಮಾಲತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page