ಪರಿಸರ ಮಲಿನೀಕರಣಗೊಳಿಸಿದಲ್ಲಿ ೩೦,೦೦೦ ರೂ. ದಂಡ

ಕಾಸರಗೋಡು: ಪರಿಸರ ಮಲಿನೀಕರಣಗೊಳಿಸಿ ಆ ಮೂಲಕ ಸಾಂಕ್ರಾಮಿಕ ರೋಗ ಹರಡುವಂತೆ ಮಾಡಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟುವ ಗುರಿಯೊಂದಿಗೆ ರೂಪು ನೀಡಲಾದ ರಾಜ್ಯ ಸಾರ್ವಜನಿಕ ಆರೋಗ್ಯ ಕಾನೂನನ್ನು ರಾಜ್ಯದಲ್ಲಿ ವಿದ್ಯುಕ್ತವಾಗಿ ಜ್ಯಾರಿಗೊಳಿಸಲಾಗಿದೆ. ಈ ಬಗ್ಗೆ ಸರಕಾರ ಅಧಿಸೂಚನೆ ಯನ್ನೂ ಜ್ಯಾರಿಗೊಳಿಸಿದೆ.

ಇದರಂತೆ ಸಾರ್ವಜನಿಕ ಪ್ರದೇಶಗಳು, ಜನನಿಬಿಡ ಪ್ರದೇಶಗಳು, ರಸ್ತೆ ಬದಿ ಮಾತ್ರವಲ್ಲ ಖಾಸಗಿ ಪ್ರದೇಶಗಳಲ್ಲೂ ತ್ಯಾಜ್ಯಗಳನ್ನು ತಂದೆಸೆಯುವವರು ಮತ್ತು ಮಲೀನ ಜಲ ಹರಿಯಬಿಡುವವರಿಗೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮೊದಲು ನೋಟೀಸು ಜ್ಯಾರಿಗೊಳಿಸಲಿದೆ. ಅದರಲ್ಲಿ ಸೂಚಿಸುವ ನಿಗದಿತ ದಿನದೊಳಗಾಗಿ  ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಮಾತ್ರವಲ್ಲ ೧೦೦೦ ರೂ.ನಿಂದ ೩೦,೦೦೦ ರೂ. ತನಕ ದಂಡವನ್ನೂ ವಸೂಲಿ ಮಾಡಲಾಗುವುದು.

ಸಾರ್ವಜನಿಕ ಆರೋಗ್ಯ ಕಾನೂನಿಗೆ ರೂಪು ನೀಡುವ ಮಸೂದೆಗೆ ಕಳೆದ ಮಾರ್ಚ್‌ನಲ್ಲೇ ವಿಧಾನಸಭೆ ಅನುಮೋದನೆ ನೀಡಿತ್ತು. ಎರಡು ವಾರದ ಹಿಂದೆ ಅದಕ್ಕೆ ರಾಜ್ಯಪಾಲರೂ ಸಹಿ ಹಾಕಿದ್ದರು. ಆ ಮೂಲಕ ಈ ಕಾನೂನು ಅಂದಿನಿಂದಲೇ ರಾಜ್ಯದಲ್ಲಿ ವಿದ್ಯುಕ್ತವಾಗಿ  ಜ್ಯಾರಿಗೊಂಡಿತ್ತು. ಈಗ ಆ ಕುರಿತಾದ ವಿದ್ಯುಕ್ತ ಅಧಿಸೂಚನೆಯನ್ನು ಸರಕಾರ ಹೊರಡಿಸಿದೆ.ಇದರಂತೆ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಸಮಿತಿಗಳಿಗೆ ರೂಪು ನೀಡಲಾಗುವುದು. ಅದರಲ್ಲಿ ಆಯುರ್ವೇದ, ಅಲೋಪತಿ, ಹೋಮಿಯೋ ಮತ್ತು ಆಯುಷ್ಮಾನ್ ವಲಯಗಳ ವೈದ್ಯರುಗಳಿಗೂ ಪ್ರಾತಿನಿದ್ಯ ನೀಡಲಾಗುವುದು. ಸಾಂಕ್ರಾಮಿಕ  ರೋಗ ತಗಲಿದ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿ ಅವರಿಗೆ ರೋಗಮುಕ್ತ ಸರ್ಟಿಫಿಕೆಟ್  ನೀಡುವ ಅವಕಾಶವನ್ನೂ ಈ ಕಾನೂನಿನಲ್ಲಿ ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page