ಪಾಯಿಖಾನೆಗಾಗಿ ತೋಡಲಾಗಿದ್ದ ಹೊಂಡಕ್ಕೆ ಬಿದ್ದು ವಲಸೆ ಕಾರ್ಮಿಕ ಮೃತ್ಯು
ಕಾಸರಗೋಡು: ಪಾಯಿಖಾನೆ ನಿರ್ಮಿಸಲು ತೋಡಲಾಗಿದ್ದ ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡು ವಲಸೆ ಕಾರ್ಮಿಕ ಸಾವನ್ನಪ್ಪಿದ ಘಟನೆ ಉಳಿಯತ್ತಡ್ಕ ಬಳಿ ನಿನ್ನೆ ನಡೆದಿದೆ. ಮೂಲತಃ ತಮಿಳುನಾಡು ಸೇಲಂ ಕಳ್ಳಕುರುಚ್ಚಿಯ ಮೈನಾಮೂಡ್ ನಿವಾಸಿ ರಾಮಸ್ವಾಮಿ-ಪೆರುಮ ದಂಪತಿ ಪುತ್ರ, ಈಗ ಕಾಸರಗೋಡು ಕೋಟೆ ರಸ್ತೆಯ ಬಾಡಿಗೆ ಕ್ವಾರ್ಟರ್ಸ್ವೊಂದರಲ್ಲಿ ವಾಸಿಸುತ್ತಿರುವ ಅಯ್ಯನಾರ್(೬೩) ಸಾವನ್ನಪ್ಪಿದ ವ್ಯಕ್ತಿ.
ಉಳಿಯತ್ತಡ್ಕ ಬಿಲಾಲ್ನ ಗರದಲ್ಲಿ ಹಸೈನಾರ್ ಎಂಬವರಿಗಾಗಿ ಹೊಸದಾಗಿ ನಿರ್ಮಿಸಲಾಗುವ ಮನೆಗಾಗಿ ಪಾಯಿಖಾನೆ ಹೊಂಡ ತೋಡಲಾಗಿತ್ತು. ಆ ಮನೆ ನಿರ್ಮಾಣ ಕೆಲಸಕ್ಕಾಗಿ ಅಲ್ಲಿಗೆ ಬಂದಿದ್ದ ಅಯ್ಯನಾರ್ ನಿನ್ನೆ ಸಂಜೆ ಅಕಸ್ಮಾತ್ ಆ ಹೊಂಡಕ್ಕೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಇತರರು ಸೇರಿ ಜನರಲ್ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದರೂ ಅದು ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.
ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ಅರುಳ್ದಾಸ್, ಅರುಳ್ ಮಣಿ, ಆರುಳ್ ಪ್ರಕಾಶ್, ಸಹೋದರ-ಸಹೋದರಿಯರಾದ ಪಾಂಡ್ಯನ್, ಪಾರ್ವತಿ, ಇಂದಿರಾ ಮತ್ತು ತಮಿಳ್ ಅರಸಿ ಎಂಬವರನ್ನು ಅಗಲಿದ್ದಾರೆ.