ಪಿ.ವಿ. ಅನ್ವರ್ ಶಾಸಕ ಸ್ಥಾನಕ್ಕೆ ರಾಜೀನಾಮೆ
ತಿರುವನಂತಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಲಂಬೂರು ವಿಧಾನಸಭೆ ಕ್ಷೇತ್ರದಿಂದ ಎಡರಂಗ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಪಿ.ವಿ. ಅನ್ವರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಅಧ್ಯಕ್ಷ ಎ.ಎನ್. ಶಂಶೀರ್‌ರನ್ನು ಇಂದು ಬೆಳಿಗ್ಗೆ ಅವರ ಚೇಂಬರ್‌ನಲ್ಲಿ ಸಂದರ್ಶಿಸಿ ಅನ್ವರ್ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅನ್ವರ್‌ರನ್ನು ತೃಣಮೂಲ ಕಾಂಗ್ರೆಸ್ ಪಾರ್ಟಿಯ ಕೇರಳ ಘಟಕದ ಸಂಚಾಲಕರನ್ನಾಗಿ ಪಕ್ಷದ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಈಗಾಗಲೇ ನೇಮಿಸಿದ್ದಾರೆ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಸಲಹೆಯಂತೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ರಾಜೀನಾಮೆ ನೀಡಿದ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಪಿ.ವಿ. ಅನ್ವರ್ ತಿಳಿಸಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನೇತಾರ ಆರ‍್ಯಾಡನ್ ಮೊಹಮ್ಮದ್ ಸತತ 30 ವರ್ಷಗಳಿಂದ ತಮ್ಮ ಕೈವಶವಿರಿಸಿಕೊಂ ಡಿದ್ದ ನಿಲಾಂಬೂರು ವಿಧಾನಸಭಾ ಕ್ಷೇತ್ರದಲ್ಲಿ ಪಿ.ವಿ. ಅನ್ವರ್ ಎಡರಂಗ ಬೆಂಬಲಿತ ಉಮೇದ್ವಾರನಾಗಿ ಎರಡು ಬಾರಿ ಪ್ರಚಂಡ ಬಹುಮತದಿಂದ ಗೆದ್ದಿದ್ದರು. ಆ ಬಳಿಕ ಅವರು ಕೆಲವು ತಿಂಗಳಿಂದ ಎಡರಂಗದ ವಿರುದ್ಧ ಬಂಡಾಯ ಎಬ್ಬಿಸಿದ್ದರು. ಮಾತ್ರವಲ್ಲ ಸರಕಾರದ ಕಾರ್ಯನಿರ್ವಹಣೆಯ ಹೆಸರಲ್ಲಿ ಮುಖ್ಯಮಂತ್ರಿಯ ವಿರುದ್ಧ ತಿರುಗಿ ಬಿದ್ದಿದ್ದರು. ಅನ್ವರ್ ಕಳೆದ 14 ವರ್ಷಗಳಿಂದ ಎಡರಂಗದ ನಿಷ್ಠಾವಂತರಾಗಿ ಕಾರ್ಯವೆಸಗಿದ್ದರು. ಆ ಎಲ್ಲಾ ಸಂಬಂಧವನ್ನು ಅವರು ಈಗ ಕಡಿದುಹಾಕಿ ಎಡರಂಗದಿಂದ ಹೊರಬಂದಿದ್ದಾರೆ.
ತೃಣಮೂಲ ಕಾಂಗ್ರೆಸ್‌ಗೆ ವಿದ್ಯುಕ್ತ ವಾಗ ಸೇರ್ಪಡೆಗೊಳ್ಳಬೇಕಾಗಿದ್ದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿರುವ ಅನಿವಾ ರ್ಯತೆಯೂ ಅನ್ವರ್‌ಗೆ ಉಂಟಾಗಿತ್ತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ತೃಣಮೂಲ ಕಾಂಗ್ರೆಸ್ ಸೇರಿದಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳ್ಳಬೇಕಾಗಿ ಬರುವ ಪರಿಸ್ಥಿತಿ ಕೆಲವೊಮ್ಮೆ ಅನ್ವರ್‌ರಿಗೆ ಎದುರಿಸಬೇಕಾಗಿ ಬರುತ್ತಿತ್ತು. ಅದನ್ನೆಲ್ಲಾ ಮನದಟ್ಟು ಮಾಡಿಕೊಂಡು ಅವರು ತಮ್ಮ ಶಾಸಕ ಸ್ಥಾನಕ್ಕೆ ಈಗ ರಾಜೀನಾಮೆ ನೀಡಿದ್ದಾರೆ. ಇನ್ನು ನಾನು ತೃಣಮೂಲ ಕಾಂಗ್ರೆಸ್‌ಗೆ ವಿದ್ಯುಕ್ತವಾಗಿ ಸೇರ್ಪಡೆಗೊಳ್ಳುವುದಾಗಿ ಅನ್ವರ್ ತಿಳಿಸಿದ್ದಾರೆ. ಚುನಾವಣೆಯಲ್ಲಿ ಇನ್ನು ನಾನು ಸ್ಪರ್ಧಿಸುವುದಿಲ್ಲ. ರಾಜ್ಯದಲ್ಲಿ ಯುಡಿಎಫ್‌ಗೆ ಇನ್ನು ಬೇಷರತ್ ಬೆಂಬಲ ನೀಡುವೆ. ನಿಲಾಂಬೂರು ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತಾರ ಜೋಯ್‌ರನ್ನು ಸ್ಪರ್ಧೆಗಿಳಿಸಬೇಕು. ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್‌ರ ವಿರುದ್ಧ ನಾನು ಈ ಹಿಂದೆ ಯಾವುದೇ ರೀತಿಯ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದಲ್ಲಿ ಅದಕ್ಕೆ ಕ್ಷಮಾಯಾಚನೆ ನಡೆಸುವೆನು. ಇನ್ನು ನನ್ನ ಹೋರಾಟ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ವಿರುದ್ದ ಮಾತ್ರವೇ ಆಗಲಿದೆಯೆಂದು ಅನ್ವರ್ ಹೇಳಿದ್ದಾರೆ.