ಪೆರಡಾಲ ಪರಿಶಿಷ್ಟ ವರ್ಗ ಕಾಲನಿಯ ಕುಡಿಯುವ ನೀರು ಮೋಟಾರ್ ಕಳವು: ಸಿಪಿಎಂನಿಂದ ಪಂ. ಕಚೇರಿಗೆ ಮಾರ್ಚ್
ಬದಿಯಡ್ಕ: ಪೆರಡಾಲ ಪರಿಶಿಷ್ಟ ವರ್ಗ ಕಾಲನಿಯ ಕುಡಿಯುವ ನೀರು ವಿತರಣೆಗೆ ಬಳಸುವ ಮೋಟಾರ್ ಕಳವುಗೈದವರನ್ನು ಮಾದರಿ ರೀತಿಯಲ್ಲಿ ಶಿಕ್ಷಿಸಬೇಕೆಂದು ಒತ್ತಾಯಿಸಿ ಸಿಪಿಎಂ ಬದಿಯಡ್ಕ, ನೀರ್ಚಾಲು ಲೋಕಲ್ ಸಮಿತಿಗಳ ನೇತೃತ್ವದಲ್ಲಿ ಬದಿಯಡ್ಕ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲಾಯಿತು.
ಕಳವುಗೈದ ಮೋಟಾರನ್ನು ಮರಳಿ ತಲುಪಿಸಿರುವುದರಿಂದ ಸಾರ್ವಜನಿಕ ಸೊತ್ತು ಕಳವು ಆರೋಪದಿಂದ ಮುಕ್ತವಾಗಲು ಸಾಧ್ಯವಿಲ್ಲವೆಂದು ಮಾರ್ಚ್ನಲ್ಲಿ ಭಾಗವಹಿಸಿದವರು ಅಭಿಪ್ರಾಯಪಟ್ಟಿದ್ದಾರೆ. ಕಳವುಗೀಡಾದ ಸೊತ್ತು ಮರಳಿ ಲಭಿಸಿದುದರಿಂದ ಕಳವು ಪ್ರಕರಣ ಅಗತ್ಯವಿಲ್ಲವೆಂಬ ಪೊಲೀಸರ ನಿಲುವನ್ನು ಅಂಗೀಕರಿಸಲಾಗದು ಎಂದು ಕಾರ್ಯಕರ್ತರು ಮುನ್ನೆಚ್ಚರಿಕೆ ನೀಡಿದರು. ಇಂತಹ ನಿಲುವನ್ನು ಕಾನೂನಿನೊಂದಿಗೆ ತೋರಿಸುವ ಸವಾಲಾಗಿಯೇ ಪಕ್ಷ ಪರಿಗಣಿಸಲಿದೆ. ಪೊಲೀಸರ ಮಧ್ಯಪ್ರವೇಶದ ಬಳಿಕ ಮರು ಸ್ಥಾಪಿಸಿದ ಮೋಟಾರ್ ಕಳವುಗೀಡಾದ ಮೋಟಾರ್ ಆಗಿದೆಯೇ ಎಂದು ಖಚಿತಪಡಿಸಬೇಕೆಂದೂ, ಪಂಚಾಯತ್ನ ಇತರ ಕುಡಿಯುವ ನೀರು ಯೋಜನೆಗಳಲ್ಲಿ ಸ್ಥಾಪಿಸಿದ ಮೋಟಾರ್ಗಳು ಈಗಲೂ ಇವೆಯೇ ಎಂದು ಪರಿಶೀಲಿಸಬೇಕೆಂದು ಮಾರ್ಚ್ ಒತ್ತಾಯಿಸಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಪಂಚಾಯತ್ ಸದಸ್ಯರ ಮಧ್ಯಸ್ಥಿಕೆಯನ್ನು ಕೊನೆಗೊಳಿಸಬೇಕು, ಉದ್ಯೋಗ ಖಾತರಿ ಯೋಜನೆಯ ನಕಲಿ ದಾಖಲೆಯಲ್ಲಿ ಸಹಿ ಹಾಕಿದ ನೌಕರನ ವಿರುದ್ಧ ತನಿಖೆ ನಡೆಸಬೇಕು, ಹಸಿರು ಸೇನೆ, ಕುಟುಂಬಶ್ರೀ ಉದ್ಯೋಗ ಖಾತರಿ ಯೋಜನೆ ಎಂಬಿವುಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದನ್ನು ತಡೆಯಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಲಾಯಿತು. ಬದಿಯಡ್ಕ ಸಿಪಿಎಂ ಕಚೇರಿ ಬಳಿಯಿಂದ ಆರಂಭಗೊಂಡ ಮಾರ್ಚ್ನ್ನು ಜಿಲ್ಲಾ ಸಮಿತಿ ಸದಸ್ಯ ಮುಹಮ್ಮದ್ ಹನೀಫ ಉದ್ಘಾಟಿಸಿದರು. ಬದಿಯಡ್ಕ ಲೋಕಲ್ ಸೆಕ್ರಟರಿ ಚಂದ್ರನ್ ಪೊಯ್ಯೆಕಂಡ, ನೀರ್ಚಾಲು ಲೋಕಲ್ ಸೆಕ್ರಟರಿ ಸುಬೈರ್ ಬಾಪಾಲಿಪ್ಪನಂ ಮಾತನಾಡಿದರು.