ಪೆರಿಯ ಅವಳಿ ಕೊಲೆ ಪ್ರಕರಣ: ಆರೋಪಿ ಜೊತೆ ಫೋಟೋ ಕ್ಲಿಕ್ಕಿಸಿದ ಕಾಂಗ್ರೆಸ್ ಮಂಡಲ ಅಧ್ಯಕ್ಷನ ತೆರವು

ಕಾಸರಗೋಡು: ಕಲ್ಯೋಟ್ ಅವಳಿ ಕೊಲೆ ಪ್ರಕರಣದ ಆರೋಪಿಯ ಮಗನ ಮದುವೆಯ ಅತಿಥಿ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಪಿಯೊಂದಿಗೆ ನಿಂತು ಫೋಟೋ ತೆಗೆಸಿಕೊಂಡ ಪೆರಿಯ ಮಂಡಲ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಪೆರಿಯ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಲಾಗಿದೆ.

ಅವಳಿ ಕೊಲೆ ಪ್ರಕರಣದ 13ನೇ ಆರೋಪಿ, ಸಿಪಿಎಂ ಪೆರಿಯ ಲೋಕಲ್ ಸೆಕ್ರೆಟರಿಯಾದ ಎನ್. ಬಾಲಕೃಷ್ಣನ್‌ರ ಮಗನ ಮದುವೆಯ ಅತಿಥಿ ಸತ್ಕಾರ  ಕಾರ್ಯಕ್ರಮದಲ್ಲಿ ಪ್ರಮೋದ್ ಭಾಗವಹಿಸಿದ್ದರು. ಫೋಟೋ ಭಾರೀ ಪ್ರಸಾರವಾಗುವುದರೊಂದಿಗೆ  ಕಾಂಗ್ರೆಸ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೆಪಿಸಿಸಿಯ ನಿರ್ದೇಶದಂತೆ ಪ್ರಮೋದ್ ಪೆರಿಯ ಅವರನ್ನು ತನಿಖಾ ವಿಧೆಯವಾಗಿ ಆ ಸ್ಥಾನದಿಂದ ತೆರವುಗೊಳಿಸಿರುವುದಾಗಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ಮಂಡಲ ಅಧ್ಯಕ್ಷ ಹೊಣೆಗಾರಿಕೆ ಯನ್ನು ತಾತ್ಕಾಲಿಕವಾಗಿ ಉದುಮ ಬ್ಲೋಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಕೆ.ವಿ.  ಭಕ್ತವತ್ಸಲನ್‌ರಿಗೆ ವಹಿಸಿಕೊಡ ಲಾಗಿದೆಯೆಂದು ಅವರು ತಿಳಿಸಿದ್ದಾರೆ. ಪ್ರಮೋದ್ ಅವರು ಪೆರಿಯಾ ಸೇವಾ ಸಹಕಾರಿ ಬ್ಯಾಂಕ್ ಡೈರೆಕ್ಟರ್ ಕೂಡಾ ಆಗಿದ್ದಾರೆ.

ಬಾಲಕಷ್ಣನ್‌ರ ಮಗನ ಮದುವೆ ಇತ್ತೀಚೆಗೆ ಪಯ್ಯನ್ನೂರಿನಲ್ಲಿ ನಡೆದಿತ್ತು. ಅತಿಥಿ ಸತ್ಕಾರ ಮಂಗಳವಾರ ಪೆರಿಯ ಮೊಯೋಲದಲ್ಲಿರುವ ಆಡಿಟೋರಿಯಂನಲ್ಲಿ ನಡೆದಿದೆ. ಈ ಆಡಿಟೋರಿಯಂ ಕಾಂಗ್ರೆಸ್ ನೇತಾರ ರಾಜನ್ ಪೆರಿಯ ಅವರ ಮಾಲಕತ್ವದಲ್ಲಿದೆ. ಬಾಲಕೃಷ್ಣನ್‌ರ ಸಹೋದರ ತನ್ನ ಮನೆಯಲ್ಲಿ ಈ ಹಿಂದೆ ಬಾಡಿಗೆಗೆ ವಾಸಿಸುತ್ತಿದ್ದರೆಂದೂ ಮದುವೆ ಅತಿಥಿ ಸತ್ಕಾರಕ್ಕೆ ಅವರು ಆಹ್ವಾನಿಸಿದ್ದಾರೆ ಎಂದು ಪ್ರಮೋದ್ ಪೆರಿಯ ಸ್ಪಷ್ಟಪಡಿಸಿದ್ದಾರೆ. ತಾನು ಮಾತ್ರವಲ್ಲ ಇನ್ನೂ ಕೆಲವು ಕಾಂಗ್ರೆಸ್ ನೇತಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆಂದು ಪ್ರಮೋದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page