ಪೆರಿಯ ಅವಳಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಎಂಟು ತಾಸುಗಳ ಕಸ್ಟಡಿ ಪರೋಲ್
ಕಾಸರಗೋಡು: ಪೆರಿಯದ ಕಲ್ಯೋಟ್ನ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿ ಕಳೆದಿರುವ ಇಬ್ಬರು ಆರೋಪಿಗಳಿಗೆ ಕೊಚ್ಚಿ ಸಿಬಿಐ ನ್ಯಾಯಾಲಯ ಎಂಟು ತಾಸುಗಳ ತನಕ ಕಸ್ಟಡಿ ಪರೋಲ್ ಮಂಜೂರು ಮಾಡಿದೆ.
ಈ ಕೊಲೆ ಪ್ರಕರಣದ ಆರನೇ ಆರೋಪಿ ಕಲ್ಯೋಟ್ ಎಚ್ಚಿಲಡ್ಕದ ಪ್ಲಾಕಾ ತೊಟ್ಟಿಲ್ನ ಆರ್. ಶ್ರೀರಾಗ್ (ಕುಟ್ಟಿ-೨೭) ಮತ್ತು ೧೦ನೇ ಆರೋಪಿ ಪೆರಿಯಾ ಕಣ್ಣೋತ್ ತಾನತ್ತಿಂಗಾಲ್ನ ಟಿ. ರಂಜಿತ್ (ಅಪ್ಪು-೨೯) ಎಂಬವರಿಗೆ ಇಂದು ಬೆಳಿಗ್ಗೆ ೮.೩೦ರಿಂದ ಸಂಜೆ ೪.೩೦ರ ಅವಧಿ ತನಕ ನ್ಯಾಯಾಲಯ ಕಸ್ಟಡಿ ಪರೋಲ್ ಮಂಜೂರು ಮಾಡಿದೆ.
ಊರಲ್ಲಿ ಅಸೌಖ್ಯ ಬಾಧಿತರಾಗಿರುವ ತಮ್ಮ ಸಂಬಂಧಿಕರನ್ನು ಕಾಣಲು ತಮಗೆ ೧೨ ತಾಸುಗಳ ಪರೋಲ್ ಮಂಜೂರು ಮಾಡಬೇಕೆಂದು ಕೋರಿ ಈ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯ ೧೨ ತಾಸುಗಳ ಬದಲು ಆರೋಪಿಗಳಿಗೆ ಎಂಟು ತಾಸುಗಳ ಪರೋಲ್ ಮಂಜೂರು ಮಾಡಿದೆ. ಸಂಬಂಧಿಕರನ್ನು ಕಾಣಲು ಮಾತ್ರವಾಗಿ ಈ ಪರೋಲ್ ಮಂಜೂರು ಮಾಡಲಾಗಿದೆ. ಆರೋಪಿಗಳನ್ನು ಅವರ ಮನೆಗೆ ಕರೆತರುವಾಗ ಅವರಿಗೆ ಕೈಕೋಳ ಅಳವಡಿಸದಂತೆಯೂ ನ್ಯಾಯಾಲಯ ನಿರ್ದೇಶ ನೀಡಿದೆ.
ಇದರಂತೆ ಈ ಇಬ್ಬರು ಆರೋಪಿ ಗಳನ್ನು ಪೊಲೀಸರ ಬೆಂಗಾವಲಿನೊಂದಿಗೆ ಇಂದು ಬೆಳಿಗ್ಗೆ ಪೆರಿಯಾಕ್ಕೆ ಅವರ ಸಂಬಂಧಿಕರ ಮನೆಗೆ ಕರೆತರಲಾಗಿದೆ. ಸಂಜೆ ೪.೩೦ಕ್ಕೆ ಅವರನ್ನು ಮತ್ತೆ ಜೈಲಿಗೆ ಸಾಗಿಸಲಾಗುವುದು. ೨೦೧೯ ಫೆಬ್ರವರಿ ೧೭ರಂದು ಪೆರಿಯಾ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯ ಕರ್ತರೂ ಆಗಿದ್ದ ಕೃಪೇಶ್ (೧೯) ಮತ್ತು ಶರತ್ಲಾಲ್ (೨೪) ಎಂಬವರನ್ನು ರಾಜಕೀಯ ದ್ವೇಷದಿಂದ ಇರಿದು ಬರ್ಬರವಾಗಿ ಕೊಲೆಗೈಯ್ಯ ಲಾಗಿತ್ತು. ಈ ಪ್ರಕರಣದ ಆರೋಪಿ ಗಳೆಲ್ಲಾ ಸಿಪಿಎಂ ಕಾರ್ಯಕರ್ತ ರಾಗಿದ್ದಾರೆ. ಮೊದಲು ಲೋಕಲ್ ಪೊಲೀಸರು, ಬಳಿಕ ಕ್ರೈಮ್ ಬ್ರಾಂಚ್ ಪೊಲೀಸರು ಈ ಅವಳಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದರು. ನಂತರ ರಾಜ್ಯ ಹೈಕೋರ್ಟ್ ನೀಡಿದ ಆದೇಶ ಪ್ರಕಾರ ಪ್ರಸ್ತುತ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸ ಲಾಗಿತ್ತು. ಈ ಅವಳಿ ಕೊಲೆ ಪ್ರಕರಣದ ವಿಚಾರಣೆ ಕೊಚ್ಚಿಯಲ್ಲಿರುವ ಸಿಬಿಐ ನ್ಯಾಯಾಲ ಯದಲ್ಲಿ ಈಗಾಗಲೇ ಆರಂಭಗೊಂಡಿದೆ. ಇದರಲ್ಲಿ ಒಟ್ಟು೧೬ ಮಂದಿ ಆರೋಪಿಗಳಿದ್ದಾರೆ.