ಪೈವಳಿಕೆ ಸಹಕಾರಿ ಬ್ಯಾಂಕ್‌ನಲ್ಲಿ ಸಿಪಿಐ- ಬಿಜೆಪಿ ಮೈತ್ರಿ ಕೂಟಕ್ಕೆ ಜಯ: ಸಿಪಿಎಂಗೆ ನಷ್ಟ

ಪೈವಳಿಕೆ: ಸಿಪಿಎಂ -ಸಿಪಿಐಯ ಹಠಮಾರಿತನ ಪೈವಳಿಕೆಯಲ್ಲಿ ಸಿಪಿಎಂಗೆ ಹಾನಿ ಸೃಷ್ಟಿಸಿದೆ. ಶನಿವಾರ ನಡೆದ ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಸಿಪಿಐ- ಬಿಜೆಪಿ ಮೈತ್ರಿಕೂಟ ಅಭ್ಯರ್ಥಿಗಳು ಎಂಟು ಸ್ಥಾನದಲ್ಲಿ ಜಯ ಗಳಿಸಿದ್ದಾರೆ. ಮುಸ್ಲಿಂಲೀಗ್‌ಗೆ ಎರಡು, ಕಾಂಗ್ರೆಸ್‌ಗೆ ಒಂದು ಸೀಟು ಲಭಿಸಿದೆ. ಆದರೆ ಸಿಪಿಎಂ ಅಭ್ಯರ್ಥಿಗಳು ಎಲ್ಲರೂ ಸೋಲನುಭವಿಸಿದರು.

೧೧ ಮಂದಿ ಆಡಳಿತ ಸಮಿತಿ ಸದಸ್ಯರಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಸಿಪಿಐಗೆ ನಾಲ್ಕು, ಸಿಪಿಎಂಗೆ ಎರಡು ಸ್ಥಾನ ಲಭಿಸಿತ್ತು. ಬಳಿಕ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸಿಪಿಎಂ. ಯುಡಿಎಫ್‌ಗೆ ಬೆಂಬಲ ನೀಡಿದ್ದು, ಕಾಂಗ್ರೆಸ್‌ಗೆ ಅಧ್ಯಕ್ಷ ಹುದ್ದೆ, ಸಿಪಿಎಂಗೆ ಉಪಾಧ್ಯಕ್ಷ ಹುದ್ದೆ ಲಭಿಸಿತ್ತು. ಹೀಗಿದ್ದರೂ ಎಡರಂಗವನ್ನು ಕೈಬಿಡದೆ ಸಿಪಿಐ ಈ ಚುನಾವಣೆಯಲ್ಲೂ ಎಡಪಕ್ಷದ ಒಕ್ಕೂಟದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದರೂ ಸಿಪಿಐ ಸ್ಪರ್ಧಿಸುವ ಸ್ಥಳಗಳಲ್ಲಿ ಸಿಪಿಎಂ ಹಾಗೂ ಯುಡಿಎಫ್‌ನ ಅಭ್ಯರ್ಥಿಗಳು ಸ್ಪರ್ಧಿಸಲು ತೀರ್ಮಾನಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಿಪಿಎಂನೊಂದಿಗೆ ಮೈತ್ರಿ, ಸಿಪಿಐ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಾಗಿದೆ. ಹನ್ನೊಂದು ಸ್ಥಾನದಲ್ಲಿ ಸಿಪಿಐಗೆ ನಾಲ್ಕು, ಸಹಕಾರ ಭಾರತಿಗೆ ನಾಲ್ಕು ಸೀಟು ಲಭಿಸಿದೆ. ಸಿಪಿಐಯ ಅಶ್ವಥ್ ಎಂ.ಸಿ. ಲಾಲ್‌ಬಾಗ್, ಮಾರ್ಸಲ್ ಡಿ’ಸೋಜಾ ಪುಷ್ಪಾ, ಪ್ರಶಾಂತ್ ಕುಮಾರ್, ಸಹಕಾರ ಭಾರತಿಯ ಶ್ರೀಧರ ಹೊಳ್ಳ ಕೈಯ್ಯಾರ್, ಗಣಪತಿ ಭಟ್ ಕುಂಡೇರಿ, ಆಶಾದೇವಿ, ಶಾಲಿನಿ ಜಯಗಳಿಸಿದ್ದಾರೆ. ಮುಸ್ಲಿಂ ಲೀಗ್‌ನ ಅಬುಸಾಲಿ, ಅಬ್ದುಲ್ ಅಸೀಸ್ ಕಳಾಯಿ, ಕಾಂಗ್ರೆಸ್‌ನಿಂದ ಸುಂದರ ಜಯಗಳಿಸಿದ್ದಾರೆ.

ಸಹಕಾರಿ ಅಭಿವೃದ್ಧಿ ವೇದಿಕೆ ಎಂಬ ಹೆಸರಲ್ಲಿ ಸಿಪಿಐ- ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಫಲಿತಾಂಶ ಹೊರ ಬಂದಾಗ ಸಿಪಿಐ ವಿರುದ್ಧ ಸಿಪಿಎಂ ರೋಷ ಮೆರವಣಿಗೆ ನಡೆಸಿದೆ. ಸಿಪಿಐ, ಬಿಜೆಪಿ ಪ್ರತ್ಯೇಕವಾಗಿ ಹರ್ಷ ಮೆರವಣಿಗೆ ನಡೆಸಿವೆ. ಕಾಂಗ್ರೆಸ್, ಲೀಗ್ ಕೂಡಾ ಆಹ್ಲಾದ ಮೆರವಣಿಗೆ ನಡೆಸಿವೆ.

ಇದೇ ವೇಳೆ ಸಿಪಿಐ ಬಿಜೆಪಿಯೊಂ ದಿಗೆ ಚುನಾವಣೆ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಂಡಿಲ್ಲವೆಂದು ಸಿಪಿಐ ಮುಖಂಡರು ತಿಳಿಸಿದ್ದಾರೆ. ಅಭ್ಯರ್ಥಿಗಳ ಮಧ್ಯೆ ಪರಸ್ಪರ ಸಹಕಾರ ಉಂಟಾಗಿರಬಹುದು. ಆದರೆ  ಹೊಂದಾಣಿಕೆ ಉಂಟಾಗಿದ್ದರೆ ಲೀಗ್ ಹಾಗೂ ಕಾಂಗ್ರೆಸ್‌ಗೆ ಹೇಗೆ ಗೆಲುವು ಲಭಿಸಿದ್ದು ಎಂದು ಅವರು ಪ್ರಶ್ನಿಸುತ್ತಾರೆ. ಇದೇ ವೇಳೆ ಸಿಪಿಐ ಹೇಳುತ್ತಿರುವುದು ಸುಳ್ಳೆಂದು, ಬಿಜೆಪಿಯ ಸಹಕಾರ ಭಾರತಿ ಹಾಗೂ ಸಿಪಿಐ  ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಸಹಕರಿಸಿದೆ ಎಂದು ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡಾ ತಿಳಿಸಿದ್ದಾರೆ.

ಬ್ಯಾಂಕ್ ಅಧ್ಯಕ್ಷರ ಚುನಾವಣೆಯಿಂದ ಸಿಪಿಐ ದೂರ ಉಳಿಯಬೇಕೆಂದು ಸೂಚಿಸಿದರೂ  ಪ್ರಾದೇಶಿಕ ರಾಜಕೀಯ ಸಮವಾಕ್ಯಗಳನುಸಾರವಾಗಿ ಸಿಪಿಐ ಕೈಗೊಳ್ಳುವ ಯಾವುದೇ ನಿಲುವು ಮಂಜೇಶ್ವರದಲ್ಲಿ  ಸಿಪಿಐ- ಸಿಪಿಎಂ ಸಂಬಂಧದಲ್ಲಿ ಬಿರುಕು ತೀವ್ರಗೊಳಿಸಲು ಉಪಯೋಗವಾಗಬಹುದೆಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page