ಪೋಕ್ಸೋ ಪ್ರಕರಣ: ಆರೋಪಿಗೆ ೩೦ ವರ್ಷ ಕಠಿಣ ಸಜೆ
ಕಾಸರಗೋಡು: ಹದಿನಾಲ್ಕು ವರ್ಷದ ವಿದ್ಯಾರ್ಥಿನಿಯನ್ನು ಕ್ವಾರ್ಟರ್ಸ್ಗೆ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ಸಿ. ದೀಪು ಅವರು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು ೩೦ ವರ್ಷ ಕಠಿಣ ಸಜೆ ಹಾಗೂ ಆರು ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಇದರ ಹೊರತಾಗಿ ಆರೋಪಿಗೆ ೧,೮೦,೦೦೦ ರೂ. ಜುಲ್ಮಾನೆಯನ್ನೂ ನ್ಯಾಯಾಲಯ ವಿಧಿಸಿದೆ.
ಉಳಿಯತ್ತಡ್ಕದ ಎ.ಕೆ. ಮೊಹಮ್ಮದ್ ಹನೀಫಾ (೬೧) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
೨೦೨೧ ಜೂನ್ ತಿಂಗಳಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರು ಉಂಟಾಗಿತ್ತು. ಅಂದು ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಸಿ.ಐ. ಆಗಿದ್ದ ಸಿ. ಭಾನುಮತಿ ಅವರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗೆ ಈ ಶಿಕ್ಷೆ ವಿಧಿಸಿದೆ. ಪ್ರೋಸಿಕ್ಯೂಷನ್ ಪರವಾಗಿ ಸ್ಪೆಷಲ್ ಪ್ರೋಸಿಕ್ಯೂಟರ್ ಎ.ಕೆ. ಪ್ರಿಯಾ ನ್ಯಾಯಾಲಯದಲ್ಲಿ ವಾದಿಸಿದ್ದರು.