ಪ್ರಮೀಳಾ ಮೃತದೇಹ ಪತ್ತೆ ಕಾರ್ಯಾಚರಣೆ ವಿಫಲ : ಕೊಚ್ಚಿಗೆ ಹಿಂತಿರುಗಿದ ಕಡಾವರ್ ಶ್ವಾನಗಳು

ಕಾಸರಗೋಡು: ಐದು ವರ್ಷಗಳ ಹಿಂದೆ ಕಾಸರಗೋಡು ವಿದ್ಯಾನಗರ ಪನ್ನಿಪ್ಪಾರೆಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಕೊಲೆಗೈಯ್ಯಲ್ಪಟ್ಟ ಎರಡು ಮಕ್ಕಳ ತಾಯಿ ಮೂಲತಃ ಕೊಲ್ಲಂ ಇರವಿಪರಂ ವಾಳತ್ತಿಂಗಲ್  ವೇಳಿ ವೀಟಿಲ್‌ನ ಪ್ರಮೀಳ (೩೦)ಳ ಮೃತದೇಹ ಪತ್ತೆಹಚ್ಚುವ ಕಾರ್ಯ ವಿಫಲಗೊಂಡಿದೆ.

ಮಣ್ಣಿನ ಅಡಿಭಾಗದಲ್ಲಿರುವ ಮನುಷ್ಯರ ಮೃತದೇಹಗಳನ್ನು ವಾಸನೆ ಮೂಲಕ ಪತ್ತೆಹಚ್ಚುವ ವಿಶೇಷ ರೀತಿಯ ತರಬೇತಿ ಲಭಿಸಿದ ಕೇರಳ ಪೊಲೀಸ್  ಇಲಾಖೆಯ ಕೊಚ್ಚಿ ಕೇಂದ್ರದಲ್ಲಿರುವ ಬಲ್‌ಜಿಯಾನ್ ಮೆಲಿನೋಯ್ಸ್ ತಳಿಗೆ ಸೇರಿದ ಮರ್ಫಿ ಮತ್ತು ಮಾಯಾ ಎಂಬ ಎರಡು ಕಡಾವರ್  ಪೊಲೀಸ್ ಶ್ವಾನಗಳನ್ನು ಕಾಸರಗೋಡಿಗೆ ತಂದು ಅವುಗಳು ಸಹಾಯದಿಂದ ಪ್ರಮೀಳಾಳ ಮೃತದೇಹ ಹೂತಿಟ್ಟಿರಬಹುದೆಂದು ಶಂಕಿಸಲಾಗುತ್ತಿರುವ ವಿದ್ಯಾನಗರ ಪಡುವಡ್ಕ ಮಾತ್ರವಲ್ಲ ಉದಯಗಿರಿಯ ಅರಣ್ಯ ಕಚೇರಿ ಬಳಿಯ ಕೆರೆಯಲ್ಲೂ ಪೊಲೀಸರು ಮೊನ್ನೆ ಮತ್ತು ನಿನ್ನೆ  ನಿರಂತರವಾಗಿ ಶೋಧ ನಡೆಸಿದರೂ ಮೃತದೇಹ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅದರಿಂದಾಗಿ ಈ ಎರಡು ಕಡಾವರ್ ಶ್ವಾನಗಳನ್ನು ಇಂದು ಪುನಃ ಕೊಚ್ಚಿಗೆ ಹಿಂತಿರುಗಿಸಲಾಯಿತು.

೨೦೧೯ ಸೆಪ್ಟಂಬರ್ ೧೯ರಂದು ರಾತ್ರಿ ಪ್ರಮೀಳಾ ಪನ್ನಿಪ್ಪಾರೆಯಲ್ಲಿ  ಆಕೆ ವಾಸಿಸುತ್ತಿದ್ದ ಕ್ವಾರ್ಟರ್ಸ್‌ನಲ್ಲಿ ಕೊಲೆಗೈಯ್ಯಲ್ಪಟ್ಟಿದ್ದಳು. ಅದಕ್ಕೆ ಸಂಬಂಧಿಸಿ ಆಕೆಯ ಪತಿ ಮೂಲತಃ ತಳಿಪರಂಬ ಅಲಿಕ್ಕೋಡು ನಿವಾಸಿ ಶಿಲ್‌ಜೋ (ಸೆಲ್ವರಾಜ್)ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಮೀಳಾಳನ್ನು ಕೊಂದು  ಮೃತದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿ ತೆಕ್ಕಿಲ್ ಹೊಳೆಗೆ ಎಸೆದಿದ್ದನೆಂದು ಅಂದು ಆತ ಹೇಳಿಕೆ ನೀಡಿದ್ದನು. ಅದರಂತೆ ಅಗ್ನಿಶಾಮಕದಳದ ಸಹಾಯದೊಂದಿಗೆ ಪೊಲೀಸರು ತೆಕ್ಕಿಲ್ ಹೊಳೆಯಲ್ಲಿ ಅಂದು ದಿನಗಳ ತನಕ ವ್ಯಾಪಕ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಎರಡು ವರ್ಷ ನ್ಯಾಯಾಂಗ ಬಂಧನದಲ್ಲಿ ಕಳೆದ ಶಿಲ್‌ಜೋ ನಂತರ ಜಾಮೀನಿಂದ ಬಿಡುಗಡೆಗೊಂಡು ತನ್ನ ವಾಸವನ್ನು Pಣ್ಣೂರಿಗೆ ಬದಲಾಯಿಸಿಕೊಂ ಡಿದ್ದನು. ಈ ಮಧ್ಯೆ ಆತ ಪಡುವಡ್ಕಕ್ಕೆ ಬಂದು ಅಲ್ಲಿ ಹುಡುಕಾಟ ನಡೆಸಿದ್ದನೆಂಬ ಮಾಹಿತಿ ಲಭಿಸಿದನ್ವಯ ಈ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಡಿವೈಎಸ್ಪಿ ಎಂ. ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಮೊನ್ನೆ ಕೊಚ್ಚಿಯಿಂದ ಕಡಾವರ್ ಪೊಲೀಸ್ ಶ್ವಾನಗಳೊಂದಿಗೆ ಆಗಮಿಸಿ  ಅದರ ಸಹಾಯದಿಂದ ಪಡುವಡ್ಕ ಮತ್ತು ಉದಯಗಿರಿ  ಕೆರೆಯಲ್ಲಿ ಶೋಧ ನಡೆಸಿದರೂ ಪ್ರಮೀಳಾಳ ಮೃತದೇಹ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆರೋಪಿ ಶಿಲ್‌ಜೋನನ್ನು ಪೊಲೀಸರು ಈ ಹಿಂದೆ ಮಂಪರು ಪರೀಕ್ಷೆಗೂ ಒಳಪಡಿಸಿದ್ದರು. ಮೃತದೇಹ ಪತ್ತೆಗಾಗಿ ಕಳೆದ ಎರಡು ದಿನಗಳಲ್ಲಾಗಿ ನಡೆಸಲಾದ ಶೋಧ ಕಾರ್ಯಾಚರಣೆಯಲ್ಲಿ ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್‌ಗಳಾದ  ರಾಜೇಶ್, ಲಿಬಿ, ರಾಧಾಕೃಷ್ಣನ್, ಪ್ರಮೋದ್, ರಾಜೇಶ್ ಗೋಪಾಲ್ ಎಂಬಿವರೂ ಒಳಗೊಂಡಿದ್ದರು.

ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಆ ಕುರಿತಾದ ವರದಿಯನ್ನು ಐಜಿಗೆ ಸಲ್ಲಿಸಲಾಗುವುದೆಂದು ಡಿವೈಎಸ್ಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page