ಪ್ರೇಯಸಿಯನ್ನು ಕೊಲೆಗೈದು ಕಳವು ನಡೆಸಿದ ಪ್ರಕರಣದ ಆರೋಪಿಗೆ ಜೀವಾವಧಿ ಸಜೆ, ಜುಲ್ಮಾನೆ
ಕಾಸರಗೋಡು: ತನ್ನ ಜತೆ ಒಂದೇ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಪ್ರೇಯಸಿ ಯನ್ನು ಕೊಲೆಗೈದು ಆಕೆಯ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ) ನ್ಯಾಯಾಧೀಶರಾದ ಎ. ಮನೋಜ್ ಅವರು ಜೀವಾವಧಿ ಸಜೆ ಹಾಗೂ ಎರಡು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಮೂಲತಃ ಕರ್ನಾಟಕ ಬಿಜಾಪುರ ಬಬಿಲೇಶ್ವರ ನಿವಾಸಿ ಹಾಗೂ ಬಳಿಕ ಉಪ್ಪಳ ಹಿದಾಯತ್ ನಗರದ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸತೊಡ ಗಿದ್ದ ಸಂತೋಷ್ ದೊಡ್ಡಮನೆ (40) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಉಪ್ಪಳ ಹಿದಾಯತ್ ನಗರದ ಕ್ವಾರ್ಟರ್ಸ್‌ನಲ್ಲಿ ಆರೋಪಿ ಸಂತೋಷ ದೊಡ್ಡಮನೆಯ ಜತೆಗೆ ವಾಸಿಸುತ್ತಿದ್ದ ಕರ್ನಾಟಕ ಉಡುಪಿ ನಿವಾಸಿ ಹುಳುಗಮ್ಮ (35) ಎಂಬಾಕೆಯನ್ನು ಅದೇ ಕ್ವಾರ್ಟರ್ಸ್‌ನಲ್ಲಿ ಆಕೆ ಧರಿಸಿದ್ದ ಸೀರೆಯನ್ನೇ ಕುತ್ತಿಗೆಗೆ ಬಿಗಿದು ಕೊಲೆ ಗೈದು, ಆಕೆ ಧರಿಸಿದ್ದ ಚಿನ್ನದ ಒಡವೆ, ಹಣ ಮತ್ತು ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಫೋನನ್ನು ಕದ್ದು ಆರೋಪಿ ಸಂತೋಷ್ ದೊಡ್ಡಮನೆ ಅಲ್ಲಿಂದ ಪರಾರಿಯಾಗಿದ್ದನು. ಸಂತೋಷ್ ಮತ್ತು ಹುಳುಗಮ್ಮ ಆ ಕ್ವಾರ್ಟರ್ಸ್‌ನಲ್ಲಿ ಪತಿ-ಪತ್ನಿಯ ರೀತಿಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಕೂಲಿ ಕಾರ್ಮಿಕರಾಗಿದ್ದರು.
ಈ ಮಧ್ಯೆ 2013 ಆಗಸ್ಟ್ 2ರಂದು ಆ ಕ್ವಾರ್ಟರ್ಸ್‌ನಲ್ಲಿ ದುರ್ನಾಥ ಬೀರುತ್ತಿದ್ದುದನ್ನು ಗಮನಿಸಿದ ನೆರೆಮನೆಯವರು ಮತ್ತು ಆ ಕ್ವಾರ್ಟರ್ಸ್ ಮಾಲಕರು ಬಂದು ನೋಡಿದಾಗ ಹುಳುಗಮ್ಮರನ್ನು ಕ್ವಾರ್ಟರ್ಸ್‌ನೊಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದರು. ಆ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ನಡೆಸಿದ ತನಿಖೆಯಲ್ಲಿ 2013 ಜುಲೈ 31ರಂದು ಬೆಳಿಗ್ಗೆ ಆರೋಪಿ ಸಂತೋಷ್ ಹುಳುಗಮ್ಮರನ್ನು ಕೊಲೆಗೈದಿದ್ದನೆಂದು ಪತ್ತೆಯಾಗಿತ್ತು. ಅಂದು ಕುಂಬಳೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಿಬಿ ಥೋಮಸ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರೋಸಿಕ್ಯೂಷನ್ ಪರ ಜಿಲ್ಲಾ ಸರಕಾರಿ ಪಬ್ಲಿಕ್ ಆಂಡ್ ಪಬ್ಲಿಕ್ ಪ್ರೋಸಿಕ್ಯೂಟರ್ ಇ. ಲೋಹಿತಾಕ್ಷನ್ ಮತ್ತು ನ್ಯಾಯಾವಾದಿ ಆದಿರಾ ಬಾಲನ್ ನ್ಯಾಯಾಲಯದಲ್ಲಿ ವಾದಿಸಿದ್ದರು.