ಫೆಬ್ರವರಿಯಿಂದ ನಳಿಗೆ ಮೂಲಕ ಮನೆಗಳಿಗೆ ಗ್ಯಾಸ್

ಕಾಸರಗೋಡು: ಸಿಟಿ ಗ್ಯಾಸ್ ಯೋಜನೆ ಪ್ರಕಾರ ಕೊಳವೆ ಮೂಲಕ ಮನೆಗಳಿಗೆ ಅಡುಗೆ ಅನಿಲ ಪೂರೈಸುವ ಯೋಜನೆ ಯಂತೆ ಕಾಸರಗೋಡು ಜಿಲ್ಲೆಯಲ್ಲಿ ಹೊಸದುರ್ಗ ತಾಲೂಕಿನ ಕೋಟೆಪ್ಪಾರ- ಚಿತ್ತಾರಿ ರಸ್ತೆ ಪರಿಸರದ ಸಹಸ್ರಾರು ಮನೆಗಳಿಗೆ ಮುಂದಿನ ವರ್ಷ ಫೆಬ್ರವರಿಯಿಂದ ನಳಿಗೆ ಮೂಲಕ ಅಡುಗೆ ವಿತರಣೆ ಪೂರೈಕೆಗೆ ಚಾಲನೆ ನೀಡಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಇದಕ್ಕಾಗಿ ಮಾವುಂಗಾಲ್- ಕೋಟೆಪ್ಪಾರದಲ್ಲಿ ಸಿಟಿ ಗೇಟ್ ಸ್ಟೇನ್ ನಿರ್ಮಿಸಲಾಗುತ್ತಿದ್ದು ಜನವರಿ ತಿಂಗಳ ಕೊನೆಯೊಳಗಾಗಿ ಇದರ ನಿರ್ಮಾಣ ಕೆಲಸ ಪೂರ್ಣಗೊಳಿಸಿ ಅದನ್ನು ಕಾರ್ಯಗತಗೊಳಿಸುವಂತೆ ಮಾಡಲು ಅಗತ್ಯದ ಸಿದ್ಧತೆ ನಡೆಸಲಾಗುತ್ತಿದೆ ಎಂದು ಇಂಡಿಯನ್ ಆಯಿಲ್- ಅದಾನಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ (ಐಒಐಜಿಪಿಎಲ್)ನ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗಳಿಗೆ ನಳಿಗೆ ಪೈಪ್ ಮೂಲಕ ಅಡುಗೆ ಅನಿಲ (ಪಿಎಲ್‌ಜಿ) ಒದಗಿಸುವ ಯೋಜನೆಯಾಗಿದೆ ಸಿಟಿಗ್ಯಾಸ್. ಇದಕ್ಕೆ ಅಗತ್ಯದ ಕೊಳವೆ ಅಳವಡಿಸುವ ಗುತ್ತಿಗೆಯನ್ನು ಗೈಲ್ ಸಂಸ್ಥೆಗೆ ವಹಿಸಿ ಕೊಡಲಾಗಿದೆ. ಈ ಯೋಜನೆಯಂತೆ ಕೊಳವೆ ಅಳವಡಿಸುವಿಕೆ ಹಾಗೂ ಗೇಟ್ ಸಿಟಿ ಸ್ಟೇಷನ್ ನಿರ್ಮಾಣ ಕಾಮಗಾರಿ ಕೆಲಸವನ್ನು ೨೦೨೦ರಲ್ಲೇ ಜಿಲ್ಲೆಯಲ್ಲಿ ಆರಂಭಿಸಲಾಗಿತ್ತು. ಆದರೆ ಕೋವಿಡ್ ಮಹಾಮಾರಿ ಬಳಿಕ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ   ಆರಂಭಗೊಂಡ ಕಾರಣದಿಂದಾಗಿ ಕಾಮಗಾರಿ ಕೆಲಸ ವಿಳಂಬಗೊಳ್ಳುವಂತೆ ಮಾಡಿದೆ.

ಕಣ್ಣೂರು ಜಿಲ್ಲೆಯಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಲ್ಲೇ ಸಿಟಿಗ್ಯಾಸ್ ಯೋಜನೆಯನ್ನು ಜ್ಯಾರಿಗೊಳಿಸಲಾಗಿದೆ. ಆದರೆ ಅದಕ್ಕಾಗಿ ಕಾಸರಗೋಡು ಜಿಲ್ಲೆಯವರ ಕಾಯುವಿಕೆ ಇನ್ನೂ ಮುಂದುವರಿಯುತ್ತಿದೆ. ಆ ಕಾಯುವಿಕೆಗೆ ವಿರಾಮ ಹಾಕುವ ಕ್ರಮಕ್ಕೆ ಈಗ ಮತ್ತೆ ಚಾಲನೆ ನೀಡಲಾಗಿದೆ.

ಅಡುಗೆ ಅನಿಲ ಪೂರೈಸಲು ಮನೆಗಳಲ್ಲಿ ಅಗತ್ಯದ ನಳ್ಳಿಗಳನ್ನು ಅಳವಡಿಸುವ ಕ್ರಮ ಮೊದಲು ನಡೆಸಬೇಕಾಗಿದೆ.  ಹೊಸದುರ್ಗದಿಂದ ಕಾಸರಗೋಡು ತನಕ (ಕೆಎಸ್‌ಟಿಪಿ ರಸ್ತೆ ಬದಿ ಮೂಲಕ) ಕೊಳವೆ ಅಳ ವಡಿಸುವ ಕೆಲಸ ಈಗ ನಡೆಯುತ್ತಿದೆ. ಈ ಕೆಲಸ ಶೇ. ೪೦ರಷ್ಟು ಈಗ ಪೂರ್ಣಗೊಂಡಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಆದರೆ ಈ ಜಿಲ್ಲೆಯಲ್ಲಿ ಈಯೋಜನೆ ಪೂರ್ಣ ಹಂತಕ್ಕೆ ತಲುಪಲು ಇನ್ನೂ ಎಂಟು ವರ್ಷ ಬೇಕಾಗಿ ಬರಬಹುದೆಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಒಂದು ಲಕ್ಷದಷ್ಟು ಮನೆಗಳಿಗೆ ಈ ಯೋಜನೆ ಪ್ರಕಾರ ನಳ್ಳಿ ಮೂಲಕ ಗ್ಯಾಸ್ ಸಂಪರ್ಕ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಮೊದಲು ಇದನ್ನು ಪೂರ್ತೀಕರಿಸಲಾಗುವುದು. ನಂತರ ಗ್ರಾಮೀಣ ಪ್ರದೇಶಗಳು, ಕೊನೆಗೆ ಮಲೆನಾಡು ಪ್ರದೇಶಗಳಿಗೆ  ಯೋಜನೆ ವಿಸ್ತರಿಸಲಾಗುವುದು. ಇದಕ್ಕಾಗಿ ಇನ್ನಷ್ಟು ಹೆಚ್ಚು ಗೇಟ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page