ಬಂದಡ್ಕದಲ್ಲಿ ಸೆರೆಗೀಡಾದ ತಂಡ ಉತ್ತರಕೊರಿಯಕ್ಕೆ ಸಾಗಿಸಿದ್ದು ೮ ಮಂದಿಯನ್ನು: ಪ್ರತಿಫಲವಾಗಿ ಪಡೆದದ್ದು ೩೨ ಲಕ್ಷ ರೂ.

ಕಾಸರಗೋಡು: ಬಂದಡ್ಕದಲ್ಲಿ ಮೊನ್ನೆ ರಾತ್ರಿ ಸೆರೆಗೀಡಾದ ಮೂರು ಮಂದಿಯ ತಂಡ ಉತ್ತರ ಕೊರಿಯಕ್ಕೆ ೮ ಮಂದಿಯನ್ನು ಸಾಗಿಸಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಇದಕ್ಕಿಂತಲೂ ಹೆಚ್ಚು ಮಂದಿಯನ್ನು ಸಾಗಿಸಲಾಗಿದೆಯೇ ಎಂದು ತಿಳಿಯಲು ರಿಮಾಂಡ್‌ನಲ್ಲಿರುವ ಆರೋಪಿಗಳನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಲು ಬೇಡಗಂ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ತೃಕ್ಕರಿಪುರ ಉಡುಂಬಂತಲದ ಎಂ.ಎ. ಅಹಮ್ಮದ್ ಅಬ್ರಾನ್ (೨೬), ಎಂ.ಎ. ಸಾಬಿತ್ (೨೫), ಪಡನ್ನ ಕ್ಕಾಡ್ ಕರುವಳದ ಮುಹಮ್ಮದ್ ಸಫ್ವಾನ್ (೨೫) ಎಂಬಿವರನ್ನು ಮೊನ್ನೆ ರಾತ್ರಿ ೯.೩೦ಕ್ಕೆ ಬಂದಡ್ಕ ಕಣ್ಣಾಡಿತ್ತೋಡ್ ಎಂಬಲ್ಲಿ ಬೇಡಗಂ ಎಸ್‌ಐ ಯು.ಎಂ. ಗಂಗಾಧರನ್ ನೇತೃತ್ವದ ಪೊಲೀಸರು ಸೆರೆ ಹಿಡಿದಿದ್ದರು. ಕೈಕಾಣಿಸಿ ಕಾರು ನಿಲ್ಲಿಸಿ ತಪಾಸಣೆ ನಡೆಸಿದಾಗ ಯುವಕರ ಮೇಲೆ ಸಂಶಯಗೊಂಡು ಸಮಗ್ರ ವಿಚಾರಣೆ ನಡೆಸಿದಾಗ ೩೭ ನಕಲಿ ಸೀಲುಗಳು ಹಾಗೂ ಹಲವು ಬ್ಯಾಂಕ್‌ಗಳ ನಕಲಿ ಸೀಲುಗಳು, ಮೂರು ಪಾಸ್‌ಪೋರ್ಟ್‌ಗಳನ್ನು ಪತ್ತೆಹಚ್ಚ ಲಾಗಿತ್ತು. ನಕಲಿ ಸೀಲುಗಳು ಹಾಗೂ ದಾಖಲೆಗಳನ್ನು ತಯಾರಿಸಿ ಊರಿಗೆ ಮರಳುತ್ತಿದ್ದಾಗ ತಂಡ ಸೆರೆಗೀಡಾಗಿದೆ. ಎಂ.ಎ. ಅಹಮ್ಮದ್ ಅಬ್ರಾನ್ ಈ ತಂಡದ ಸೂತ್ರಧಾರನೆಂದು ಪೊಲೀಸರು ತಿಳಿಸಿದ್ದಾರೆ. ಈತ ಉತ್ತರ ಕೊರಿಯ ದಲ್ಲಿ ಕೆಲಸ ನಿರ್ವಹಿ ಸುತ್ತಿದ್ದಾನೆ. ಊರಿಗೆ ಮರಳಿದ ಬಳಿಕ ಇನ್ನಷ್ಟು ಮಂದಿಯನ್ನು  ಕಳುಹಿಸಿ ಕೊಡಲು  ನಕಲಿ ಸೀಲುಗಳನ್ನು ನಿರ್ಮಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಲಾ ನಾಲ್ಕು ಲಕ್ಷ ರೂಪಾಯಿ ಪಡೆದು ಈಗಾಗಲೇ ೮ ಮಂದಿಯನ್ನು ಉತ್ತರಕೊರಿಯಕ್ಕೆ ಕಳುಹಿಸಿರುವುದಾಗಿಯೂ ಅವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿ ಸುತ್ತಿದ್ದಾರೆಂದು  ತಿಳಿದು ಬಂದಿರುವು ದಾಗಿ ಪೊಲೀಸರು ಹೇಳುತ್ತಿದ್ದಾರೆ. 

ಈ ರೀತಿ ಉತ್ತರ ಕೊರಿಯಕ್ಕೆ ತೆರಳಿದವರ ಮನೆಗಳಿಗೆ ಫೋನ್ ಕರೆ ಮಾಡಿ ವಿಚಾರಿಸಿದಾಗ  ಪೊಲೀಸರಿಗೆ ಈ ವಿಷಯ ತಿಳಿದು ಬಂದಿದೆ. ಅಸಲಿ ಪಾಸ್‌ಪೋರ್ಟ್, ಭಾವಚಿತ್ರಗಳನ್ನು ಮಾತ್ರವೇ ತಂಡ ದಾಖಲೆಗಳಾಗಿ ಕೇಳಿ ಪಡೆದುಕೊಳ್ಳುತ್ತಿದೆ. ಪ್ರಯಾಣಕ್ಕೆ ಅಗತ್ಯವುಳ್ಳ ಇತರ ದಾಖಲೆಗಳನ್ನು ತಂಡ ನಕಲಿಯಾಗಿ ತಯಾ ರಿಸುತ್ತಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಬೆಂಗಳೂರು ಮಡಿವಾಳದ ಸಂಸ್ಥೆಯೊಂದರಲ್ಲಿ ನಕಲಿ ಸೀಲುಗಳು, ಮತ್ತಿತರ ದಾಖಲೆಗಳನ್ನು ತಯಾರಿಸಲಾಗಿದೆ. ಆರೋಪಿಗಳನ್ನು ಕಸ್ಟಡಿಗೆ ತೆಗೆದು ಪ್ರಸ್ತುತ ಸಂಸ್ಥೆಗೆ ತಲುಪಿಸಿ ಮಾಹಿತಿ ಸಂಗ್ರಹಿಸಲು ತನಿಖಾ ತಂಡ ನಿರ್ಧರಿಸಿದೆ.

Leave a Reply

Your email address will not be published. Required fields are marked *

You cannot copy content of this page