ಬಪ್ಪಾಯಿತೊಟ್ಟಿಯ ಯುವಕನನ್ನು ಬಂಬ್ರಾಣಕ್ಕೆ ತಲುಪಿಸಿ ಹಲ್ಲೆ: ಇನ್ನೋರ್ವ ಆರೋಪಿ ಬಂಧನ; ಓರ್ವನಿಗಾಗಿ ಶೋಧ
ಕುಂಬಳೆ: ಉಪ್ಪಳ ಬಪ್ಪಾಯಿತೊಟ್ಟಿ ಹನಫಿ ಮಸ್ಜಿದ್ ಸಮೀಪದ ಅಮಾನ್ ಮಂಜಿಲ್ ನಿವಾಸಿ ಮುಹಮ್ಮದ್ ಫಾರೂಕ್ (೩೫)ರನ್ನು ಮನೆಯಿಂದ ಕಾರಿನಲ್ಲಿ ಬಂಬ್ರಾಣಕ್ಕೆ ಕರೆದೊಯ್ದ ಬಳಿಕ ಅಲ್ಲಿ ತಂಡ ಗಂಭೀರವಾಗಿ ಹಲ್ಲೆಗೈದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ಯನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ.
ಬಂಬ್ರಾಣ ನಿವಾಸಿ ವರುಣ್ರಾಜ್ ಶೆಟ್ಟಿ (೩೦) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಕುಂಬಳೆ ಎಸ್ಐ ಟಿ. ಎಂ. ವಿಪಿಲ್ ನೇತೃತ್ವದ ಪೊಲೀಸರು ನಿನ್ನೆ ಬಂಬ್ರಾಣದಿಂದ ಸೆರೆಹಿಡಿದಿದ್ದಾರೆ.
ಈ ತಿಂಗಳ ೨ರಂದು ಮುಂಜಾನೆ ೨ ಗಂಟೆ ವೇಳೆ ಬಪ್ಪಾಯಿತೊಟ್ಟಿಯ ಮನೆಯಲ್ಲಿ ನಿದ್ರಿಸುತ್ತಿದ್ದ ಮುಹಮ್ಮದ್ ಫಾರೂಕ್ರನ್ನು ಸಂಬಂಧಿಕನಾದ ಕಡಂಬಾರು ನಿವಾಸಿ ಇರ್ಶಾದ್ ಕಾರಿನಲ್ಲಿ ಕರೆದೊಯ್ದಿದ್ದನು. ಬಂಬ್ರಾಣದ ಬಯಲುಪ್ರದೇಶ ಬಳಿಯ ಮನೆಯೊಂದರ ಸಮೀಪಕ್ಕೆ ಕಾರು ತಲುಪಿಸಿ ಮುಹಮ್ಮದ್ ಫಾರೂಕ್ರನ್ನು ಇಳಿಸಲಾಗಿತ್ತು. ಈ ವೇಳೆ ಮನೆಯೊ ಗಿನಿಂದ ಬಂದ ಬಂಬ್ರಾಣದ ಕಿರಣ್ ರಾಜ್, ಈಗ ಬಂಧಿತನಾದ ವರುಣ್ ರಾಜ್ ಶೆಟ್ಟಿ ಹಾಗೂ ಇನ್ನೋರ್ವ ಸೇರಿ ಕಬ್ಬಿಣದ ಸರಳು ಹಾಗೂ ಪಂಚ್ನಿಂದ ಹಲ್ಲೆಗೈದು ಗಂಭೀರ ಗಾಯಗೊಳಿಸಿದರು. ಈ ವೇಳೆ ಕಾರಿನಲ್ಲಿ ಬೇರೆಲ್ಲಿಗೋ ತೆರಳಿದ ಇರ್ಶಾದ್ ಅಲ್ಲಿಗೆ ಮರಳಿ ಬಂದು ಆತನೂ ಮೊಹಮ್ಮದ್ ಫಾರೂಕ್ಗೆ ಕಬ್ಬಿಣದ ಸರಳಿನಿಂದ ಹೊಡೆದು ಗಾಯಗೊಳಿಸಿದ್ದನು. ಬಳಿಕ ಮುಹಮ್ಮದ್ ಫಾರೂಕ್ರನ್ನು ಕಾರಿಗೆ ಹತ್ತಿಸಿ ಬಪ್ಪಾಯಿತೊಟ್ಟಿಯ ಮನೆಗೆ ತಲುಪಿಸಿ ಆ ತಂಡ ಅಲ್ಲಿಂದ ಪರಾರಿಯಾಗಿತ್ತು. ಅಂದು ಮಧ್ಯಾಹ್ನವಾದರೂ ಮುಹಮ್ಮದ್ ಫಾರೂಕ್ ಮನೆ ಪರಿಸರದಲ್ಲಿ ಕಾಣದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳು ಅಲ್ಲಿಗೆ ತಲುಪಿ ನೋಡಿದಾಗ ಮುಹಮ್ಮದ್ ಫಾರೂಕ್ ಗಂಭೀರ ಗಾಯಗೊಂಡು ಮನೆಯೊಳಗೆ ಪತ್ತೆಯಾಗಿದ್ದಾರೆ. ಇದರಿಂದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ವಿಷಯ ಆಗ್ರಹಿಸಿದಾಗಲೇ ಹಲ್ಲೆ ವಿಷಯ ಅರಿವಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿ ಕೇಸು ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಬಂಬ್ರಾಣದ ಕಿರಣ್ರಾಜ್ ಹಾಗೂ ೧೭ರ ಹರೆಯದ ಓರ್ವ ಬಾಲಕನನ್ನು ಇತ್ತೀಚೆಗೆ ಬಂಧಿಸಿದ್ದರು. ಇದೀಗ ವರುಣ್ರಾಜ್ ಶೆಟ್ಟಿಯನ್ನು ಬಂಧಿಸಲಾಗಿದೆ. ಇನ್ನು ಇರ್ಷಾದ್ನನ್ನು ಸೆರೆಹಿಡಿಯಲು ಬಾಕಿಯಿದ್ದು, ಆತನಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.