ಬಳ್ಳೂರು ಸಮೀಪದ ತಿರುವು ಅಪಾಯಕಾರಿ : ರಸ್ತೆಯ ಇಕ್ಕಡೆಗಳಲ್ಲಿ ಆಳದ ಬಾವಿಯಿಂದ ಭೀತಿ
ಬಾಯಾರು: ಬಳ್ಳೂರು ಸಮೀಪ ರಸ್ತೆಯ ಎರಡೂ ಕಡೆಗಳ ತಗ್ಗುಪ್ರದೇಶದಲ್ಲಿ ಬೃಹತ್ ಆಳದ ಬಾವಿಗಳಿದ್ದು, ವಾಹನ ಸವಾರರಿಗೆ ಆತಂಕ ಉಂಟುಮಾಡುತ್ತಿದೆ. ಪೈವಳಿಕೆ ಪಂಚಾಯತ್‌ನ 7, 8ನೇ ವಾರ್ಡ್ ಸಂಗಮಿಸುವ ಲೋಕೋಪಯೋಗಿ ಇಲಾಖೆಯ ಕನಿಯಾಲ ರಸ್ತೆಯ ಬಳ್ಳೂರು ಸೇತುವೆ ಸಮೀಪ ಅಪಾಯಕಾರಿ ತಿರುವು ಇದ್ದು, ಇಕ್ಕಡೆಗಳ ತಗ್ಗು ಪ್ರದೇಶಗಳಲ್ಲಿ ಬೃಹತ್ ಬಾವಿಗಳು ಕಂಡು ಬರುತ್ತಿದೆ. ಇಲ್ಲಿ ತಿರುವು ಆದ ಕಾರಣ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದ್ದು, ನಿಯಂತ್ರಣ ತಪ್ಪಿದರೆ ಬಾರೀ ಆಳದ ಬಾವಿಗೆ ಬೀಳುವ ಸಂಭವವೂ ಇದೆ.
ರಸ್ತೆ ಬದಿ ತಡೆ ಬೇಲಿ ಇಲ್ಲದಿರುವುದು ಅಪಾಯ ಸಾಧ್ಯತೆಯನ್ನು ಹೆಚ್ಚಿಸಿದೆ. ಇಲ್ಲಿ ಈ ಹಿಂದೆ ಬೈಕ್ ಸವಾರರೋರ್ವರು ರಸ್ತೆಯಿಂದ ತಗ್ಗು ಪ್ರದೇಶಕ್ಕೆ ಬಿದ್ದು ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಬಳ್ಳೂರು ಕನಿ ಯಾಲ ದಾರಿಯಾಗಿ ಪೆರ್ಮುದೆ, ಬಾಯಾರು, ಬೆರಿಪದವು ಸಹಿತ ವಿವಿಧ ಕಡೆಗಳಿಗೆ ಖಾಸಗಿ ಬಸ್‌ಗಳು ಅಲ್ಲದೆ ಶಾಲಾ ಬಸ್‌ಗಳ ಸಹಿತ ನೂರಾರು ವಾಹನಗಳು ಈ ದಾರಿಯಾಗಿ ಸಂಚರಿಸುತ್ತಿವೆ. ಇಲ್ಲಿ ತಡೆಬೇಲಿ ಸ್ಥಾಪಿಸಿ ರಸ್ತೆ ಅಗಲಗೊಳಿಸಲು ಸ್ಥಳೀಯ ಪ್ರತಿನಿಧಿಗಳಾದ ಜಯಲಕ್ಷ್ಮಿ ಭಟ್ ಹಾಗೂ ಮಮತಾ ಪೂಜಾರಿ ಲೋಕೋಪಯೋಗಿ ಇಲಾ ಖೆಯ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ.