ಬಾಂಗ್ಲಾ ಪ್ರಜೆಯನ್ನು ಕಸ್ಟಡಿಗೆ ಬಿಟ್ಟುಕೊಡುವಂತೆ ಕೋರಿ ಪೊಲೀಸರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ
ಕಾಸರಗೋಡು: ಹೊಸದುರ್ಗ ಬಲ್ಲಾ ಅವಿ ಪೂಡಂಕಲ್ಲಿನ ಬಾಡಿಗೆ ಕ್ವಾರ್ಟರ್ಸ್‌ವೊಂದರಲ್ಲಿ ಅಕ್ರಮವಾಗಿ ನೆಲೆಸಿ ಬಳಿಕ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನಕ್ಕೊಳಗಾದ ಬಾಂಗ್ಲಾದೇಶದ ಪ್ರಜೆ ಶಾಬೀರ್ ಶೇಕ್ ನಾಬಿಯಾ ಅಲಿಯಾಸ್ ಅತಿಯಾರ್ ರಹ್ಮಾನ್ (22)ನನ್ನು ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ಬಿಟ್ಟುಕೊಡುವಂತೆ ಕೋರಿ ಹೊಸದುರ್ಗ ಪೊಲೀಸರು ಹೊಸ ದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯ (1) ಅರ್ಜಿ ಸಲ್ಲಿಸಿದ್ದಾರೆ.
ಎರ್ನಾಕುಳಂ ಪೆರುಂಬಾವೂರು ನಿಂದ ಇತ್ತೀಚೆಗೆ ೫೦ಕ್ಕೂ ಹೆಚ್ಚು ಮಂದಿ ಬಾಂಗ್ಲಾ ದೇಶದ ಪ್ರಜೆಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಹೀಗೆ ಅಲ್ಲಿ ಬಂಧಿತರಾದ ಬಾಂಗ್ಲಾದೇಶಿಗರೊಂದಿಗೆ ಅತಿಂiರ್ ರಹ್ಮಾನ್ ನಿರಂತರ ಸಂಪರ್ಕ ಹೊಂದಿದ್ದನು. ಮಾತ್ರವಲ್ಲ ಆತ ಆ ತಂಡದ ಸದಸ್ಯನೂ ಆಗಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆದ್ದರಿಂದ ಆ ಬಗ್ಗೆ ಆತನನ್ನು ಸಮಗ್ರ ವಿಚಾರಣೆಗೊಳಪಡಿಸಬೇಕಾದ ಅಗತ್ಯವಿದೆ. ಮಾತ್ರವಲ್ಲ ಇತರ ಹಲವು ಮಾಹಿತಿಗಳನ್ನು ಸಂಗ್ರಹಿಸಬೇಕಾಗಿದೆ. ಆದ್ದರಿಂದ ಹೆಚ್ಚಿನ ವಿಚಾರಣೆಗಾಗಿ ಆತನನ್ನು ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದೂ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪೊಲೀಸರು ತಿಳಿಸಿದ್ದಾರೆ.
ಗಾರೆ ಕಾರ್ಮಿಕನಾಗಿ ಹೊಸದುರ್ಗದಲ್ಲಿ ದುಡಿಯುತ್ತಿದ್ದ ಅತಿಯಾರ್ ರಹ್ಮಾನ್ ಅಲ್ಲಿಂದ ಭಾರೀ ಮೊತ್ತವನ್ನು ಬಾಂಗ್ಲಾದೇಶಕ್ಕೆ ಕಳುಹಿಸಿಕೊಡುತ್ತಿದ್ದನು. ಆದ್ದರಿಂದ ಆತನ ಸಂಪಾದನೆಯ ಮೂಲ ಹಾಗೂ ಆತ ಹೊಂದಿರುವ ವಿದೇಶಿ ನಂಟಿನ ಬಗ್ಗೆಯೂ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.