ಬಾಯಾರುಪದವು ಅಸಿಫ್ ನಿಗೂಢ ಸಾವು ಪ್ರಕರಣ: ತನಿಖೆ ಕ್ರೈಂ ಬ್ರಾಂಚ್‌ಗೆ
ಮಂಜೇಶ್ವರ: ಪೈವಳಿಕೆ ಬಳಿಯ ಬಾಯಾರುಪದವಿನ ಟಿಪ್ಪರ್ ಲಾರಿ ಚಾಲಕ ಮುಹಮ್ಮದ್ ಅಸಿಫ್ (29)ರ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಈ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಅಸಿಫ್‌ರತಾಯಿ ಮುಖ್ಯಮಂತ್ರಿ ಮತ್ತು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ತನಿಖೆಯನ್ನು ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ಪ್ರಕರಣದ ತನಿಖೆಯನ್ನು ಈತನಕ ಮಂಜೇಶ್ವರ ಪೊಲೀಸರು ನಡೆಸುತ್ತಿದ್ದರು.
ಕಳೆದ ಬುಧವಾರ ಮುಂಜಾನೆ ಕಾಯರ್‌ಕಟ್ಟೆ ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯಲ್ಲಿ ಆಸಿಫ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಲಾರಿಯಲ್ಲಿ ರಕ್ತದ ಕಲೆಗಳು ಹಾಗೂ ಬಿದಿರಿನ ಬೆತ್ತವೊಂದು ಪತ್ತೆಯಾಗಿತ್ತು. ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬೆನ್ನಿನ ಮೂಳೆ ಮುರಿತಕ್ಕೊಳಗಾಗಿರುವುದೇ ಆಸಿಫ್‌ರ ಸಾವಿಗೆ ಕಾರಣವಾಗಿದೆಯೆಂದು ತಿಳಿಸಲಾ ಗಿತ್ತು. ಆದರೆ ಬೆನ್ನು ಮೂಳೆ ಮುರಿತಕ್ಕೆ ಕಾರಣ ಪತ್ತೆಹಚ್ಚಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಈ ಸಾವಿನ ನಿಗೂಢತೆ ಮುಂದುವರಿಯುತ್ತಿದೆ.