ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 40 ವರ್ಷ ಕಠಿಣ ಸಜೆ, ಜುಲ್ಮಾನೆ
ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 40 ವರ್ಷ ಕಠಿಣ ಸಜೆ ಹಾಗೂ 2 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 8 ತಿಂಗಳ ಹೆಚ್ಚುವರಿ ಸಜೆ ಅನು ಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಇಡುಕ್ಕಿ ಜಿಲ್ಲೆಯ ಉಡುಂಬಚ್ಚಾಲದ ಕಲ್ಲುಂಕ್ಲಾಕಲ್ ನಿವಾಸಿ ಶಾಮಿಲ್ ಕೆ. ಮ್ಯಾಥ್ಯು (37) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಪೋಕ್ಸೋ ಕಾನೂನು ಪ್ರಕಾರ ಆರೋಪಿಗೆ 20 ವರ್ಷ ಕಠಿಣ ಸಜೆ, 1 ಲಕ್ಷ ರೂ. ಜುಲ್ಮಾನೆ ಹಾಗೂ ಐಪಿಸಿ ಸೆಕ್ಷನ್ 376(3)ರ ಪ್ರಕಾರ 20 ವರ್ಷ ಸಜೆ ಹಾಗೂ 1 ಲಕ್ಷ ರೂ. ಜುಲ್ಮಾನೆ ವಿಧಿಸಲಾಗಿದೆ. ಹೀಗೆ ಆರೋಪಿಗೆ ಒಟ್ಟಾರೆಯಾಗಿ 40 ವರ್ಷ ಸಜೆ ಹಾಗೂ 2 ಲಕ್ಷ ರೂ. ಜುಲ್ಮಾನೆ ವಿಧಿಸಲಾಗಿದೆ.
2016 ನವೆಂಬರ್ ತಿಂಗಳ ಯಾವುದೋ ಒಂದು ದಿನದಂದು ಸಂಜೆ ಕಾಸರಗೋಡು ನಾಯಮ್ಮಾರ್ ಮೂಲೆಯಲ್ಲಿ 16ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಬಾಬು ಪೆರಿಂuಟಿಜeಜಿiಟಿeಜತ್ ಈ ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಸಿದ್ದರು. ನಂತರ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಎ. ಮತ್ತು ಕುಟ್ಟಿಕೃಷ್ಣನ್ ಎ. ಎಂಬವರು ತನಿಖೆ ಪೂರ್ತೀಕರಿಸಿದ್ದರು. ನಂತರ ಇನ್ಸ್ಪೆಕ್ಟರ್ ಮನೋಜ್ ವಿ.ವಿ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪ್ರೋಸಿಕ್ಯೂಟರ್ ಪ್ರಿಯಾ ಎ.ಕೆ. ನ್ಯಾಯಾಲಯದಲ್ಲಿ ವಾದಿಸಿದ್ದರು.