ಬಾಲಕಿಗೆ ಲೈಂಗಿಕ ಕಿರುಕುಳ ಮದ್ರಸಾ ಅಧ್ಯಾಪಕ ಸೆರೆ
ಕಾಸರಗೋಡು: ೧೪ರ ಹರೆಯದ ಬಾಲಕಿಗೆ ಕಳೆದ ಎರಡು ವರ್ಷಗಳಿಂದ ಹಲವು ಬಾರಿಯಾಗಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಮುನ್ನಾಡ್ ಕೊಟ್ಟೋಡಿ ನಿವಾಸಿ ಸಿ. ಅಬ್ದುಲ್ ರಾಶಿದ್ (೩೧) ಎಂಬಾತನನ್ನು ಚಂದೇರ ಎಸ್ಐ ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಪಡನ್ನ ಪಂಚಾಯತ್ನ ಎಡಚಾಕೈನ ಮದ್ರಸಾ ಅಧ್ಯಾಪಕನಾಗಿದ್ದ ಆರೋಪಿ ಆತ ವಾಸಿಸುತ್ತಿದ್ದ ಕ್ವಾರ್ಟರ್ಸ್ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಅನಂತರ ಬಾಲಕಿಗೆ ಬೆದರಿಕೆಯೊಡ್ಡಿ ಆಕೆಯ ಮನೆಗೂ ಬಂದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಅದರಂತೆ ಪೊಲೀಸರು ಆರೋಪಿಯ ವಿರುದ್ಧ ಪೊಕ್ಸೋ ಕಾನೂನು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಂತರ ವೈದ್ಯಕೀಯ ತಪಾಸಣೆಗೊಳಪಡಿಸಿ ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.