ಬಾಲಕಿಯನ್ನು ಅಪಹರಿಸಿ ದೌರ್ಜನ್ಯಗೈದ ಪ್ರಕರಣ : ಆರೋಪಪಟ್ಟಿ ಸಿದ್ಧತೆ ಅಂತಿಮ ಹಂತದಲ್ಲಿ

ಕಾಸರಗೋಡು: ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ ಬಯಲು ಪ್ರದೇಶಕ್ಕೆ ಕೊಂಡೊಯ್ದು ದೌರ್ಜನ್ಯ ಕ್ಕೊಳಪಡಿಸಿದ ಬಳಿಕ  ಕಿವಿಯ ಬೆಂಡೋಲೆ ಲಪಟಾಯಿಸಿ ಪರಾರಿ ಯಾದ ಪ್ರಕರಣದ ಆರೋಪಪಟ್ಟಿ ತಯಾರಿ ಅಂತಿಮ ಹಂತದಲ್ಲಿದೆ.

ಜೂನ್ 20ರೊಳಗೆ ಆರೋಪ ಪಟ್ಟಿ ನ್ಯಾಯಾಲಯದಲ್ಲಿ ಹಾಜರು ಪಡಿಸಲು ಬೇಕಾದ ಕ್ರಮಗಳು ಮುಂದುವರಿಯುತ್ತಿದೆ. ಮೇ ೧೫ರಂದು ಇಡೀ ರಾಜ್ಯವನ್ನು  ಬೆಚ್ಚಿ ಬೀಳಿಸಿದ ಘಟನೆ ನಡೆದಿರುತ್ತದೆ. ಈ ಘಟನೆಗೆ ಜೂನ್ ೧೫ರಂದು ಒಂದು ತಿಂಗಳು ಪೂರ್ತಿಯಾಗಲಿದೆ. ಕರ್ನಾಟಕದ ಕೊಡಗು ನಾಪೊಕ್ಲು ನಿವಾಸಿಯಾದ ಪಿ. ಸಲೀಂ (35) ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ.  ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸು ಸಹಿತ ಹಲವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ.

ಬಾಲಕಿ ಅಜ್ಜನೊಂದಿಗೆ ನಿದ್ರಿಸಿದ್ದಳು. ಅಜ್ಜ ಮುಂಜಾನೆ ವೇಳ ಹಾಲು ಕರೆಯಲೆಂದು  ಹೊರಗೆ ತೆರಳಿದ ಸಂದರ್ಭದಲ್ಲಿ ಈ ಹಿಂದೆಯೇ ನಿರ್ಧರಿಸಿದ ಪ್ರಕಾರ ಆರೋಪಿ ಸಲೀಂ ತೆರೆದಿಟ್ಟ ಬಾಗಿಲ ಮೂಲಕ ಮನೆಗೆ ನುಗ್ಗಿ ಬಾಲಕಿಯನ್ನು ಅಪಹರಿಸಿ ಕೊಂಡೊಯ್ದು ಲೈಂಗಿಕ ದೌರ್ಜನ್ಯಗೈದಿದ್ದನು. ಘಟನೆ ಬಳಿಕ ರಾಜ್ಯದಿಂದ ತಲೆಮರೆಸಿಕೊಂಡ ಆರೋಪಿ ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರ ಎಂಬಿಡೆಗಳಲ್ಲಿ ತಲೆಮರೆಸಿಕೊಂಡಿದ್ದನು. ಅನಂತರ ಆಂಧಪ್ರದೇಶದಲ್ಲಿ ಹೋಟೆಲ್ ಕೆಲಸ ಹುಡುಕುತ್ತಿದ್ದಾಗ ಕೇರಳ ಪೊಲೀಸ್‌ನ  ಸೆರೆಗೀಡಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿ ಕೆಲವು ದಾಖಲೆಗಳು ತನಿಖಾ ತಂಡಕ್ಕೆ ಸಿಗಲು ಬಾಕಿಯಿದೆ. ಅವುಗಳು ಕೂಡಾ ಶೀಘ್ರ ಲಭಿಸಬಹುದೆಂದು ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಅದು ಲಭಿಸಿದ ಕೂಡಲೇ ಆರೋಪಪಟ್ಟಿ ಸಲ್ಲಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page